ಶಿವಮೊಗ್ಗ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಂಟಾದ ಸಣ್ಣ ಜಗಳ ದುರಂತ ಅಂತ್ಯ ಕಂಡಿದ್ದು, ಸ್ನೇಹಿತನ ಪರ ನಿಂತಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ ಗುಂಪು ಹಲ್ಲೆಗೆ ಬಲಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬವನ್ನು ಭೇಟಿ ಮಾಡಿ ₹15 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ ತೆರಳುವ ಮುನ್ನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಂಕೇತ್ ಅವರ ತಂದೆ-ತಾಯಿಯನ್ನು ಭೇಟಿಯಾದ ಮುಖ್ಯಮಂತ್ರಿಗಳು, ಸರ್ಕಾರದ ವತಿಯಿಂದ ₹10 ಲಕ್ಷ ಹಾಗೂ ಸಚಿವ ಮಧು ಬಂಗಾರಪ್ಪ ಅವರ ವೈಯಕ್ತಿಕ ₹5 ಲಕ್ಷ ಸಹಾಯಧನದ ಚೆಕ್ನ್ನು ಸಂಕೇತ್ ತಂದೆ ಶಿವಕುಮಾರ್ ಅವರಿಗೆ ವಿತರಿಸಿದರು.
ಶಿವಮೊಗ್ಗದ ಸುಳೇಬೈಲು ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಜಗಳ ಉಂಟಾಗಿ, ಅದು ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಸ್ನೇಹಿತನಿಗೆ ಬೆಂಬಲವಾಗಿ ನಿಂತ ಸಂಕೇತ್ ಮೇಲೆ ಬಾಲಕರ ಗುಂಪೊಂದು ದಾಳಿ ನಡೆಸಿತ್ತು. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಜೀವ ಉಳಿಯಲಿಲ್ಲ.
ಕುಟುಂಬದ ನೋವನ್ನು ಹಂಚಿಕೊಂಡ ಮುಖ್ಯಮಂತ್ರಿ, ಸರ್ಕಾರದಿಂದ ಅಗತ್ಯ ನೆರವು ಮತ್ತು ಬೆಂಬಲ ಒದಗಿಸುವ ಭರವಸೆ ನೀಡಿದ್ದಾರೆ. ಪ್ರಕರಣದ ಸಂಬಂಧ ತನಿಖೆ ಮುಂದುವರೆದಿದೆ.



