ಬೆಂಗಳೂರು: ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ಅಂತಿಮ ದಿನಗಳು ಆರಂಭವಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಕಲಂ 21ರಡಿ ಕಾಂಗ್ರೆಸ್ ತಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಹೆಸರನ್ನು ಬದಲಾಯಿಸಲು ಮುಂದಾಗಿರುವುದು ಬಡವರ ವಿರೋಧಿ ಕ್ರಮವಾಗಿದ್ದು, ಯೋಜನೆಯನ್ನು ಸಾಯಿಸುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದರು.
ಹೆಸರು ಬದಲಾವಣೆ ಹಿಂಪಡೆಯುವ ತನಕ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಹೋರಾಟ ನಡೆಸಲಾಗುವುದು ಎಂದ ಅವರು, ಕೇಂದ್ರ ಸರ್ಕಾರದ ಅನುದಾನ ಅನುಪಾತ ಬದಲಾವಣೆ ಮೂಲಕ ಯೋಜನೆಗೆ ‘ಸಮಾಧಿ’ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಹಾಗೂ ಪಕ್ಷ ಒಟ್ಟಾಗಿ ದೇಶವ್ಯಾಪಿ ಆಂದೋಲನ ರೂಪಿಸಿ ಜನಾಭಿಪ್ರಾಯ ನಿರ್ಮಿಸಲಿದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.



