ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಇಂದು ದೆಹಲಿಯಲ್ಲಿ ನಡೆಯಲಿದ್ದು, ಈ ಉನ್ನತಮಟ್ಟದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಸಂಬಂಧ ಉಂಟಾಗಿರುವ ಗೊಂದಲಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಿಂದ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆಗಳು ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿವೆ.
ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಆದರೆ ಆಹ್ವಾನ ಇಲ್ಲದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಗೈರು ಹಾಜರಿಯಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಕುರಿತ ಗೊಂದಲಗಳನ್ನು ಹೈಕಮಾಂಡ್ ಮಟ್ಟದಲ್ಲಿ ಬಗೆಹರಿಸುವುದು ಕಷ್ಟಕರವಾಗಬಹುದು ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಪಕ್ಷದೊಳಗೆ ಕೇಳಿಬರುತ್ತಿವೆ.
ಇದರ ನಡುವೆಯೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲಾಗುವುದು ಎಂದು ನಿನ್ನೆ ದೆಹಲಿಗೆ ತೆರಳುವ ಮೊದಲು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಹೇಳಿಕೆ ರಾಜ್ಯ ಕಾಂಗ್ರೆಸ್ ಮುಖಂಡರಲ್ಲಿ ಸ್ವಲ್ಪ ಮಟ್ಟಿನ ಆಶಾಭಾವನೆಯನ್ನು ಮೂಡಿಸಿದೆ.
ಇನ್ನೊಂದೆಡೆ, ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ದೀರ್ಘ ಚರ್ಚೆ ನಡೆಸಿರುವುದು ಗಮನಾರ್ಹವಾಗಿದೆ. ಈ ಬೆಳವಣಿಗೆ ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ಕುರಿತಂತೆ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.



