ರಾಯಚೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಕಳೆದ ವಾರವಷ್ಟೇ ಹಾಸನಾಂಬೆ ದರ್ಶನ ಪಡೆದಿದ್ದ ಡಿಕೆಶಿ, ಇದೀಗ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಆರಂಭದಲ್ಲಿ ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ಬಳಿಕ ಮೂಲ ರಾಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಆ ಬಳಿಕ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ನಂತರ ಶ್ರೀಗಳು ಶ್ರೀಮಠದ ಪರಂಪರೆ ಹಾಗೂ ಈಗಿನ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ, ಶ್ರೀಗಳು ಡಿ.ಕೆ.ಶಿವಕುಮಾರ ಹಾಗೂ ಅವರ ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತಾಡಿ, ಈ ಹಿಂದೆ ಜೋಡೊ ಯಾತ್ರೆ ವೇಳೆ ನಾನು ಹಾಗೂ ರಾಹುಲ್ ಗಾಂಧಿ ಅವರು ಮಂತ್ರಾಲಯ ಮಠಕ್ಕೆ ಬಂದಿದ್ದೆವು. ನಂತರ ಮತ್ತೊಮ್ಮೆ ರಾಯರ ಮಠಕ್ಕೆ ಬರಬೇಕು ಅನ್ನೋದು ಇತ್ತು. ಎಲ್ಲದಕ್ಕೂ ದೇವರ ಅನುಗ್ರಹ, ಗುರುವಿನ ಅನುಗ್ರಹ ಮುಖ್ಯ. ಇಂದು ವಿಶೇಷವಾದ ದಿನವೆಂದು ದರ್ಶನಕ್ಕೆ ಬಂದಿದ್ದೇನೆ ಎಂದು ಹೇಳಿದರು.



