ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಎಲ್ಲಾ ಜಾತಿ, ಧರ್ಮದ ಸಮುದಾಯಗಳು ತಮ್ಮ-ತಮ್ಮ ಹಬ್ಬ, ಆಚರಣೆಗಳನ್ನು ಶಾಂತಿಯಿಂದ ಆಚರಿಸುತ್ತ, ನೆಮ್ಮದಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಸೌಹಾರ್ದತೆಯ ವಾತಾವರಣ ಹಾಳು ಮಾಡುವ ಉದ್ದೇಶದಿಂದ ಕೋಮುವಾದಿ ಕಲ್ಲಡ್ಕ ಪ್ರಭಾಕರ ಭಟ್ ಒಂದು ಸಮುದಾಯದ ಮಹಿಳೆಯರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಸ್ಲಂ ಜನಾಂದೋಲನ-ಕರ್ನಾಟಕ ಸಮಿತಿ ಸಹಕಾರದಲ್ಲಿ ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಪದಾಧಿಕಾರಿಗಳು ಕೂಡಲೇ ಇಂತಹ ಕೋಮುವಾದಿಗಳನ್ನು ರಾಜ್ಯದಿಂದ ಗಡಿಪಾರ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ, ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ನಿಂದಿಸಿದ್ದಾರೆ. ಒಂದು ಸಮುದಾಯದ ಮಹಿಳೆಯರ ಹೆರಿಗೆ ಕುರಿತು ಮತ್ತು ಆ ಸಮುದಾಯದಲ್ಲಿ ಹುಟ್ಟುವ ಮಕ್ಕಳ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದಾರೆ. ಸಮುದಾಯದ ನಡುವೆ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಪದೇ ಪದೇ ಒಂದು ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.
ಮಹಿಳಾ ಸಮಿತಿ ಮುಖಂಡರಾದ ನೀಲಮ್ಮ ಹಡಪದ ಮಾತನಾಡಿ, ಪದೇ-ಪದೇ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಮಹಿಳಾ ವಿರೋಧಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಮಿತಿ ಮುಖಂಡರಾದ ಮೆಹರುನಿಸಾ ಡಂಬಳ, ಪ್ರೇಮಾ ಮಣ್ಣವಡ್ಡರ, ಮೈಮುನ ಬೈರಕದಾರ, ಸಾಕ್ರುಬಾಯಿ ಗೋಸಾವಿ, ಆಯೀಸಾ ಹೆಚ್, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ, ಮಕ್ತುಮಸಾಬ ಮುಲ್ಲಾನವರ, ದುರ್ಗಪ್ಪ ಮಣ್ಣವಡ್ಡರ, ಮಂಜುಬಾಯಿ ಗೋಸಾವಿ, ಶಮಶಾದಬೇಗಂ ಬೈರಕದಾರ, ಲಕ್ಷ್ಮೀಬಾಯಿ ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ಸೋನಾಬಾಯಿ ಗೋಸಾವಿ ಸೇರಿದಂತೆ ವಿವಿಧ ಸ್ಲಂ ಪ್ರದೇಶದ ನೂರಾರು ಮಹಿಳಾ ಮುಖಂಡರು ಉಪಸ್ಥಿತರಿದ್ದರು.



