HomeCrime NewsDigital Arrest: ಡಿಜಿಟಲ್ ಅರೆಸ್ಟ್ ಸೋಗಿನಲ್ಲಿ ಬೆಂಗಳೂರಿನ ಟೆಕ್ಕಿಗೆ ದೋಖಾ; ಬರೋಬ್ಬರಿ ₹31.83 ಕೋಟಿ ವಂಚನೆ!

Digital Arrest: ಡಿಜಿಟಲ್ ಅರೆಸ್ಟ್ ಸೋಗಿನಲ್ಲಿ ಬೆಂಗಳೂರಿನ ಟೆಕ್ಕಿಗೆ ದೋಖಾ; ಬರೋಬ್ಬರಿ ₹31.83 ಕೋಟಿ ವಂಚನೆ!

For Dai;y Updates Join Our whatsapp Group

Spread the love

ಬೆಂಗಳೂರು: ತಂತ್ರಜ್ಞಾನ ಮುಂದುವರಿದಂತೆ, ದುರುಳರು ತಮ್ಮ ಕುಕೃತ್ಯಗಳಿಗೆ ತಂತ್ರಜ್ಞಾನದ ಒತ್ತಾಸೆಯನ್ನು ಪಡೆಯುವ ಪರಿಪಾಠವೂ ಜಾಸ್ತಿಯಾಗುತ್ತಿದೆ. ಸೈಬರ್ ವಂಚಕರು ದೂರದ ನೆಲೆಯಲ್ಲಿ ಕೂತು, ಪೊಲೀಸ್ ಅಥವಾ ಯಾವುದೋ ಸರಕಾರಿ ಇಲಾಖೆಯ ಹೆಸರನ್ನು ಮುಂದು ಮಾಡಿಕೊಂಡು ಜನರಿಗೆ ಕರೆಮಾಡಿ ಬೆದರಿಸಿ, ‘ಡಿಜಿಟಲ್ ಅರೆಸ್ಟ್’ಗೆ ಒಳಪಡಿಸಿ ವಂಚಿಸಿ, ತಮ್ಮ ಕಾರ್ಯ ಸಾಧಿಸಿ ಕೊಳ್ಳುವಂಥ ಪ್ರಕರಣಗಳು ಅಬಾಧಿತವಾಗಿ ಮುಂದುವರಿದಿವೆ.

ಇದೀಗ ಮಹಿಳಾ ಉದ್ಯೋಗಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿದ ಬರೋಬ್ಬರಿ 31.83 ಕೋಟಿ ರೂ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇಂದಿರಾನಗರದ ನಿವಾಸಿ, 57 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಅಪರಾಧಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಣ್ಗಾವಲಿನಲ್ಲಿರಿಸಿದ್ದರು. ಅಲ್ಲದೆ, ಹಣ ದೋಚಿ ನಂತರ ಹಠಾತ್ತನೆ ಸಂಪರ್ಕ ಕಡಿತಗೊಳಿಸಿದ್ದರು ಎಂದು ತಿಳಿದು ಬಂದಿದೆ.

2024ರ ಸೆಪ್ಟೆಂಬರ್ 15ರಂದು ಡಿಹೆಚ್​ಎಲ್​ ಕೊರಿಯರ್ ಕಂಪನಿಯ ಪ್ರತಿನಿಧಿ ಸೋಗಿನಲ್ಲಿ ವಂಚಕನೊಬ್ಬ ಕರೆ ಮಾಡಿದ್ದಾನೆ. ‘ನಿಮ್ಮ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ ಎಂಡಿಎಂ ಮಾದಕ ದ್ರವ್ಯಗಳನ್ನೊಳಗೊಂಡಿದ್ದ ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಕೊರಿಯರ್​ ಕೇಂದ್ರಕ್ಕೆ ಬಂದಿದೆ’ ಎಂದು ಹೇಳಿದ್ದಾನೆ.

ಆದರೆ, ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಆಕೆ ಹೇಳಿದ್ದಾಳೆ. ಆಗ, ಫೋನ್ ಸಂಖ್ಯೆ ಪ್ಯಾಕೇಜ್‌ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಕರೆ ಮಾಡಿದವ ಹೇಳಿಕೊಂಡಿದ್ದಾನೆ. ಈ ವಿಷಯದ ಬಗ್ಗೆ ಸೈಬರ್ ಅಪರಾಧ ಸೆಲ್​ಗೆ ದೂರು ನೀಡುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ಆಕೆ ಪ್ರತಿಕ್ರಿಯಿಸುವ ಮೊದಲು, ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಲಾಗಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ನಂತರ, ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು ಆಕೆಯ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಹೇಳಿ, ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಅಥವಾ ಕಾನೂನು ಸಹಾಯ ಪಡೆಯದಂತೆ ಆಕೆಗೆ ಎಚ್ಚರಿಕೆ ನೀಡಿದ್ದಾರೆ. ಆಕೆಗೆ ಮಾಹಿತಿ ನೀಡಿದರೆ ಆಕೆಯ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದರು ಎಂದು ವರದಿ ಉಲ್ಲೇಖಿಸಿದೆ. ಹೀಗಾಗಿ ಭಯದಿಂದ ಮತ್ತು ತನ್ನ ಮಗನ ಮದುವೆ ಸಮೀಪಿಸುತ್ತಿದ್ದರಿಂದ ಹೆದರಿದ್ದ ಸಂತ್ರಸ್ತೆ ವಂಚಕರು ಹೇಳಿದ ರೀತಿಯಲ್ಲೇ ನಡೆದುಕೊಂಡಿದ್ದರು.

ಅದಾದ ನಂತರ ಕೆಲವು ದಿನಗಳ ಬಳಿಕ ಸ್ಕೈಪ್ ವಿಡಿಯೋ ಕರೆಯ ಮೂಲಕ ಸಂತ್ರಸ್ತೆಯನ್ನು ‘ಗೃಹಬಂಧನ’ಕ್ಕೆ ಒಳಪಡಿಸಲಾಯಿತು. ನಂತರ, ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಆಕೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಿದ. ಈ ಸಮಯದಲ್ಲಿ, ಸಂತ್ರಸ್ತೆ ವರ್ಕ್ ಫ್ರಂ ಹೋಮ್​ನಲ್ಲಿದ್ದರು.

2024 ರ ಸೆಪ್ಟೆಂಬರ್ 23ರಂದು, ಆರ್‌ಬಿಐನ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ವಂಚಕರು ಹಂತಹಂತವಾಗಿ ಹಣ ವಸೂಲಿ ಮಾಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ವಂಚಕರ ಸೂಚನೆಯಂತೆ ಸಂತ್ರಸ್ತೆ ತನ್ನ ಫಿಕ್ಸೆಡ್ ಡಿಪಾಸಿಟ್​​ಗಳನ್ನು ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು 187 ವಹಿವಾಟುಗಳಲ್ಲಿ ವಂಚಕರಿಗೆ ವರ್ಗಾಯಿಸಿದ್ದಾಳೆ. 2025 ರ ಫೆಬ್ರವರಿ ಒಳಗೆ ಪರಿಶೀಲನೆ ಮಾಡಿದ ನಂತರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸಂತ್ರಸ್ತೆಗೆ ನಕಲಿ ತನಿಖಾ ಅಧಿಕಾರಿಗಳು ಭರವಸೆ ನೀಡಿದ್ದರು.

ಅಲ್ಲದೆ, ಸಂತ್ರಸ್ತೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು. ಆದರೆ, ಹಣವನ್ನು ವಾಪಸ್ ನೀಡಲು ವಂಚಕರು ಒಂದಲ್ಲ ಒಂದು ಅಡ್ಡಿ ಹೇಳುತ್ತಲೇ ಇದ್ದರು. ನಂತರ ಅನುಮಾನಗೊಂಡ ಸಂತ್ರಸ್ತೆ ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸರಿಗೆ 2025ರ ನವೆಂಬರ್ 14 ರಂದು ದೂರು ನೀಡಿದ್ದರು. ಅದರಂತೆ ಎಫ್​ಐಆರ್ ದಾಖಲಿಸಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.

ಅಕ್ಷರಸ್ಥರ ಪರಿಸ್ಥಿತಿಯೇ ಹೀಗಾದರೆ, ಇಂಥದೊಂದು ಮೋಸದ ಜಾಲದ ಕುರಿತು ಅರಿವಿಲ್ಲದ ಅಮಾಯಕರನ್ನು ಸೈಬರ್ ವಂಚಕರು ಯಾವ ಪರಿಯಲ್ಲಿ ಹುರಿದು ಮುಕ್ಕಬಹುದು ಎಂಬುದನ್ನು ಊಹಿಸಿಕೊಳ್ಳಿ. ದಿನಬೆಳಗಾದರೆ, ಸ್ಮಾರ್ಟ್ ಫೋನ್ ಅನ್ನು ತೆರೆಯುತ್ತಿದ್ದಂತೆ, ‘ಈ ಲಿಂಕ್ ಅನ್ನು ಒತ್ತಿ, ಆಕರ್ಷಕ ಕೊಡುಗೆಯನ್ನು ಪಡೆಯಿರಿ’ ಎಂಬ ಚಿತ್ತಾಕರ್ಷಕ ಹುಳುವನ್ನು ಸಿಕ್ಕಿಸಿ ಕೊಂಡಿರುವ ಗಾಳಗಳು ಅದರ ಮಡಿಲಲ್ಲಿ ಕಾಣುವುದುಂಟು.

ಮೊಬೈಲ್ ಬಳಕೆದಾರರು ಒಂದೊಮ್ಮೆ ಮೈಮರೆತು, ವಂಚಕರು ಅಲ್ಲಿ ನೀಡಿರುವ ಸೂಚನೆಯಂತೆ ನಡೆದುಕೊಂಡರೆ, ಬಳಕೆದಾರರ ಬ್ಯಾಂಕ್ ಖಾತೆಯಲ್ಲಿನ ಹಣವು ಹೇಳ ಹೆಸರಿಲ್ಲದಂತೆ ಮಾಯ ವಾಗುತ್ತದೆ. ಇದು ಸೈಬರ್ ವಂಚನೆಯ ಒಂದು ಪ್ರಭೇದವಷ್ಟೇ, ಹೇಳುತ್ತ ಹೋದರೆ ಇನ್ನೂ ಸಾಕಷ್ಟಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!