ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧೆಯನ್ನು ಬೆದರಿಸಿ 38 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾರ್ಚ್ 11ರಂದು ವೃದ್ಧೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಮುಂಬೈ ಶಾಖೆಯಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ ಹಾಗೂ ಆ ಖಾತೆಯಿಂದ ಭಯೋತ್ಪಾದಕರಿಗೆ ಹಣ ವರ್ಗಾವಣೆ ಆಗುತ್ತಿದೆ ಎಂದು ಬೆದರಿಕೆ ಹಾಕಲಾಗಿದೆ.
ಇದನ್ನು ತನಿಖೆಯ ಭಾಗವೆಂದು ಹೇಳಿ, ಆರ್‌ಬಿಐ ಪರಿಶೀಲನೆ ನಡೆಯಲಿದೆ. 38 ಲಕ್ಷ ರೂಪಾಯಿ ಜಮಾ ಮಾಡಿದರೆ ಒಂದು ಗಂಟೆಯೊಳಗೆ ಹಣವನ್ನು ಮರಳಿ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ.
ವಂಚಕರ ಮಾತು ನಂಬಿದ ಗೀತಾ ಎಂಬ ವೃದ್ಧೆ ತನ್ನ ಬಳಿ ಇದ್ದ 38 ಲಕ್ಷ ರೂಪಾಯಿಯನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಜೊತೆಗೆ, 72 ಗಂಟೆಗಳ ಕಾಲ ಯಾರನ್ನೂ ಸಂಪರ್ಕಿಸಬಾರದು ಎಂದು ಕೂಡ ಸೂಚಿಸಿದ್ದಾರೆ.
ಎರಡು ದಿನಗಳಾದರೂ ಹಣ ಮರಳಿ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ವೃದ್ಧೆ, ತಾನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಮೋಸ ಹೋಗಿರುವುದನ್ನು ಅರಿತು ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ.



