HomeGadag Newsಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯದಿರಿ

ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯದಿರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಪ್ರಾಣ, ಯೌವನ, ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬಾರವು. ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆಯದೇ ಸದುಪಯೋಗಪಡಿಸಿಕೊಳ್ಳಬೇಕು. ಸುಖಮಯ ಬಾಳಿಗೆ ಸದ್ವಿದ್ಯೆ, ಉತ್ತಮ ಸಂಬಂಧ ಮತ್ತು ಆದರ್ಶ ಸ್ನೇಹ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ತಾಲೂಕಿನ ಹಣ್ಣೆ ಹಿರೇಮಠದಲ್ಲಿ ಶ್ರೀ ಚೌಡೇಶ್ವರಿ-ನಾಗಮ್ಮದೇವಿ ದೇವಾಲಯಗಳ ವಾರ್ಷಿಕೋತ್ಸವ ಹಾಗೂ ಲಿಂ.ಶಿವಾನಂದ ಶ್ರೀಗಳವರ ಪುಣ್ಯಾರಾಧನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಅಧಿಕಾರ, ಕೀರ್ತಿ, ಧನ-ಕನಕ, ವಸ್ತು, ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಸತ್ತವರುಂಟು. ಜಗದ ಜನತೆಗೆ ಬೆಳಕು ತೋರಿದ ಆಚಾರ್ಯರು ಋಷಿಮುನಿಗಳು ಮತ್ತು ಸಂತ ಮಹಾಂತರ ಆದರ್ಶ ಮಾತುಗಳು ಶಾಶ್ವತವಾಗಿ ಬೆಳಕು ತೋರುತ್ತವೆ. ಮಹಾತ್ಮರ ದೃಷ್ಟಿಯಲ್ಲಿ ಧರ್ಮವೇ ಅವರ ಸಂಪತ್ತು. ಸತ್ಯವೇ ಅವರ ನಿಜವಾದ ಸಂಪತ್ತಾಗಿದೆ. ಮೌಲ್ಯಗಳ ಉಳಿವು-ಅಳಿವು ಮಾನವನ ಆಚರಣೆಯಲ್ಲಿವೆ. ನೀತಿವಂತರು ನಿರಾಶರಾಗದೇ ನೋವು ನುಂಗಿ ನಲಿವನ್ನೇ ಹೊರ ಹಾಕಿದ್ದಾರೆ. ಅಸಹನೆ, ಅಸಮಾಧಾನ, ಅತೃಪ್ತಿ ಹೋಗಲಾಡಿಸಿಕೊಂಡವನೇ ನಿಜವಾದ ಧರ್ಮ ನಿಷ್ಠ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ರೇಣುಕ ಗೀತೆಯಲ್ಲಿ ಬೋಧಿಸಿದ್ದಾರೆ ಎಂದರು.

ಸಮಾರಂಭ ಉದ್ಘಾಟಿಸಿದ ಅ.ಭಾ.ವೀ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ. ಲೋಕೇಶ್ ಮಾತನಾಡಿ, ಮನುಷ್ಯ ಧರ್ಮಕ್ಕೆ, ಮಾನವೀಯತೆಗೆ ಹೆಚ್ಚು ಬೆಲೆ ಕೊಡಬೇಕು. ಅಶಾಂತಿಯಿಂದ ಕೂಡಿದ ಬದುಕಿಗೆ ಧರ್ಮ ಪರಿಪಾಲನೆಯಿಂದ ಮಾತ್ರ ನಿಜ ಶಾಂತಿ ದೊರಕಲು ಸಾಧ್ಯ. ಲಿಂ.ಶಿವಾನಂದ ಶಿವಾಚಾರ್ಯರು ಎಲ್ಲರೊಂದಿಗೆ ಬೆರೆತು ಬಾಳಿದ ಅಪರೂಪದ ವ್ಯಕ್ತಿತ್ವ ಅವರದು ಆಗಿತ್ತೆಂಬುದನ್ನು ಸ್ಮರಿಸಿದರು.

ಮಾಜಿ ಶಾಸಕ ಡಿ.ಎಸ್. ಸುರೇಶ ಮಾತನಾಡಿ, ಹುಟ್ಟು ಎಷ್ಟು ಸಹಜವೋ ಮರಣ ಅಷ್ಟೇ ನಿಶ್ಚಿತ. ಹುಟ್ಟು-ಸಾವುಗಳ ಮಧ್ಯದ ಬದುಕನ್ನು ಸಮೃದ್ಧಗೊಳಿಸಿಕೊಂಡವರು ಲಿಂಗೈಕ್ಯ ಶಿವಾನಂದ ಶಿವಾಚಾರ್ಯರು. ಅವರ ಆದರ್ಶ ಚಿಂತನಗಳನ್ನು ಅಳವಡಿಸಿಕೊಂಡು ಬಾಳಬೇಕೆಂದರು.

ನೇತೃತ್ವ ವಹಿಸಿದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಜ್ಜನರ ಒಡನಾಟ ಜೀವನ ಶ್ರೇಯಸ್ಸಿಗೆ ಕಾರಣವಾದರೆ ದುರ್ಜನರ ಸಹವಾಸ ನಾಶಕ್ಕೆ ಕಾರಣ. ಆಧ್ಯಾತ್ಮದ ಕೃಷಿಯ ಮೂಲಕ ಭಕ್ತರ ಮನದಂಗಳದಲ್ಲಿ ಬೆಳಕು ತುಂಬಿದವರು ನನ್ನ ಗುರುದೇವ ಶಿವಾನಂದರೆಂದು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಗೆಜ್ಜಗೊಂಡನಹಳ್ಳಿ ಡಾ. ಜಿ.ಎಸ್. ಚಂದ್ರಶೇಖರ್ ಅವರು ಶಿವಾನಂದ ಶ್ರೀಗಳವರ ಧ್ಯೇಯ, ಆದರ್ಶಗಳನ್ನು ಪ್ರಾಸ್ತಾವಿಕ ನುಡಿಯಲ್ಲಿ ಸಲ್ಲಿಸಿದರು.

ಸಮಾರಂಭದಲ್ಲಿ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ರಟ್ಟೀಹಳ್ಳಿ ಶಿವಲಿಂಗ ಶಿವಾಚಾರ್ಯರು, ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಮಾದೀಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ನಂದೀಪುರ ನಂದೀಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಕುಪ್ಪೂರು ತೇಜೇಶ್ವರ ಶಿವಾಚಾರ್ಯರು ಪಾಲ್ಗೊಂಡು ಶ್ರದ್ಧಾಂಜಲಿ ನುಡಿ ನುಡಿದರು.

ಮುಖ್ಯ ಅತಿಥಿಗಳಾಗಿ ತರೀಕೆರೆಯ ಕಾಂಗ್ರೆಸ್ ಮುಖಂಡರಾದ ರಚನಾ ಶ್ರೀನಿವಾಸ್, ಕೆ.ಆರ್. ಆನಂದಪ್ಪ, ಜಿ.ಎಸ್. ಪ್ರಕಾಶ್, ಬಿ.ರಾಜಣ್ಣ, ವಿಶಾಲಾಕ್ಷಮ್ಮ, ಮುಂಡ್ರೆ ಗಿರಿರಾಜ್ ಪಾಲ್ಗೊಂಡಿದ್ದರು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ, ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಭೌತಿಕ ಸಂಪತ್ತು ಶಾಂತಿ-ಸಮಾಧಾನ ತರದು. ಆಧ್ಯಾತ್ಮ ಸಂಪತ್ತು ನಿಜ ಸಂಪತ್ತೆಂದು ತಿಳಿದು ಬಾಳಿದವರು ಲಿಂ.ಶಿವಾನಂದ ಶಿವಾಚಾರ್ಯರು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!