ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸರ್ಕಾರಗಳಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡುತ್ತಿದ್ದು, ರೈತರು ತಾವು ಈಗಾಗಲೇ ಹೊಂದಿರುವ ಎಫ್‌ಐಡಿ ಸಂಖ್ಯೆಯನ್ನು ಪಡೆದುಕೊಂಡು ಅಗತ್ಯವಿರುವ ಬೀಜ-ಗೊಬ್ಬರವನ್ನು ಪಡೆದುಕೊಳ್ಳಬೇಕು ಎಂದು ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧ್ಯಮಠ ಹೇಳಿದರು.
ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿರುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಹಂಗಾಮಿನ ಬೀಜ, ಗೊಬ್ಬರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಇಲಾಖೆಯಿಂದ ಮುಂಗಾರು ಎದುರಿಸಲು ಸಜ್ಜುಗೊಂಡಿದ್ದು, ರೈತರಿಗೆ ಅಗತ್ಯವಿರುವ ಹೆಸರು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬೀಜವನ್ನು ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ವಿತರಣೆ ಮಾಡಲಾಗುತ್ತದೆ. ಆದ್ದರಿಂದ ಹೋಬಳಿ ವ್ಯಾಪ್ತಿಯ ರೈತರು ಆರ್‌ಎಸ್‌ಕೆಯಲ್ಲಿ ದೊರೆಯ ಬೀಜ ಗೊಬ್ಬರವನ್ನು ಖರೀದಿಸಲು ಮುಂದಾಗಬೇಕು ಎಂದರು.
ರೋಣ ಕೃಷಿ ಇಲಾಖೆಯ ಸಹಾಯಕ ನಿದೇರ್ಶಕ ರವೀಂದ್ರಗೌಡ ಪಾಟೀಲ ಮಾತನಾಡಿ, ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರವನ್ನು ರೈತರು ರೂಢಿಗತವಾಗಿ ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಹಾಗಾಗಿ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯಕ್ತ ರಸಗೊಬ್ಬರ ಬಳಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಶರಣಯ್ಯ ಮುಸ್ತಗಟ್ಟಿ, ಶರಣಪ್ಪ ಬೆಟಗೇರಿ, ನರೇಗಲ್ಲ ಕೃಷಿ ಅಧಿಕಾರಿ ಬಸವರಾಜ ಗದಗಿನ, ಸಿ.ಕೆ. ಕಮ್ಮಾರ, ಮುದಕಪ್ಪ ಬೆಟಗೇರಿ, ಶಿವನಗೌಡ ಪಾಟೀಲ, ಚನ್ನಸಪ್ಪ ಹಡಪದ, ಬಸಪ್ಪ ಹೊಗರಿ, ಚನ್ನಬಸಪ್ಪ ಕುಷ್ಟಗಿ, ಶಿವಕುಮಾರ ಮಾವಿನಕಾಯಿ, ಸಿಬ್ಬಂದಿ ಬಾಬು ರಾಜೂರ, ಬಸವರಾಜ ರೊಟ್ಟಿ, ಅನ್ನಪೂರ್ಣ ಗಿರಡ್ಡಿ, ಸಿದ್ದು ಸೊಲಗಿ, ಶಿಲ್ಪಾ ಕಟಗೇರಿ, ಶರಣಪ್ಪ ಸಜ್ಜನ ಸೇರಿದಂತೆ ಇತರರಿದ್ದರು.



