ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಆರ್ಥಿಕವಾಗಿಯೂ ಸ್ವಾವಲಂಬಿಗಳಾಗುತ್ತಿದ್ದಾರೆ. ಸ್ವಂತ ಉದ್ಯೋಗ ಮಾಡುವ ಉದ್ದೇಶವಿದ್ದವರು ಹಲವು ತರಬೇತಿಗಳನ್ನು ಪಡೆದು ಸ್ವಾವಲಂಬಿಗಳಾಗಿ ಜೀವನ ಸಾಗಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಪಟ್ಟಣದ ವರ್ಷಾ ಬ್ಯೂಟಿಪಾರ್ಲರ್‌ನವರು ಒಂದು ತಿಂಗಳ ಕಾಲ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಷಿಯನ್ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಾರೆ ಎಂದು ಮುಳಗುಂದದ ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ಪ್ರಕಾಶ ಮದ್ದಿನ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಬ್ಯೂಟಿಷಿಯನ್ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್‌ಗಳು, ಬ್ಯೂಟಿಷಿಯನ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಆದಾಯದ ನಿರೀಕ್ಷೆಯಲ್ಲಿ ಗುಣಮಟ್ಟದಲ್ಲಿ ಕೊರತೆಯಾಗದಂತೆ, ಚರ್ಮಕ್ಕೆ ಹಾನಿಯಾಗದ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಎಲ್ಲರಿಗೂ ಒಪ್ಪಿಗೆಯಾಗುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತರಬೇತುದಾರರಾದ ಪುಷ್ಪ ಅಡವಿ ಮಾತನಾಡಿ, ಬ್ಯೂಟಿಪಾರ್ಲರ್‌ಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವದು, ಗ್ರಾಹಕರ ಪ್ರೀತಿ ವಿಶ್ವಾಸ ಸಂಪಾದಿಸುವುದು, ಇನ್ನಿತರ ಪಾರ್ಲರ್‌ಗಳೊಂದಿಗೆ ಸ್ಪರ್ಧೆಗೆ ಇಳಿಯದೆ ಹೊಂದಾಣಿಕೆಯಿಂದ ಸಾಗುವದು ಅವಶ್ಯವಾಗಿದೆ. ಕಲಿತ ವಿದ್ಯೆಯು ಸಾರ್ಥಕವಾಗಬೇಕಾದರೆ ಗ್ರಾಹಕರ ಮೆಚ್ಚುಗೆ ಪಡೆಯುವದು ಅವಶ್ಯ ಎನ್ನುವದನ್ನು ತರಬೇತಿ ಪಡೆದವರು ತಿಳಿದುಕೊಂಡು ಸಾಗಬೇಕು. ಇದರಿಂದ ಸ್ವಾವಲಂಬನೆಯ ಜೀವನ ಸಾಗಿಸುವಂತಾದರೆ ತರಬೇತಿ ನೀಡಿರುವದಕ್ಕೆ ಸಾರ್ಥಕತೆ ಎನಿಸುತ್ತದೆ ಎಂದರು.
ದಶರಥ ಕೋಟೆಗೌಡ್ರ, ದಿಗಂಬರ ಪೂಜಾರ, ಶೈಲಜಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತರಬೇತಿ ಪಡೆದ ಎಲ್ಲ ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.



