ರಾಯಚೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಾಯಚೂರಿನ ರೈಸ್ ಮಿಲ್ ಉದ್ಯಮ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಫ್ತು ವ್ಯವಹಾರ ಸ್ಥಗಿತಗೊಂಡಿರುವುದರಿಂದ ಅಕ್ಕಿ ಉತ್ಪಾದನೆ ಶೇ.50ರಷ್ಟು ಕಡಿಮೆಯಾಗಿದ್ದು, ಪ್ರತಿ ತಿಂಗಳು ನಡೆಯುತ್ತಿದ್ದ ಸುಮಾರು 200 ಕೋಟಿ ರೂಪಾಯಿ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ರಾಯಚೂರು ನಗರದಲ್ಲೇ ಸುಮಾರು 95 ರೈಸ್ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಂದ ಅರಬ್ ರಾಷ್ಟ್ರಗಳು, ಆಫ್ರಿಕಾ ದೇಶಗಳು, ಬಾಂಗ್ಲಾದೇಶ, ದುಬೈ ಮತ್ತು ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಅಕ್ಕಿ ರಫ್ತು ಮಾಡಲಾಗುತ್ತಿತ್ತು. ಆದರೆ ಯುದ್ಧ ಪರಿಸ್ಥಿತಿಯಿಂದ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಸೋನಾಮಸೂರಿ, ಬಾಸುಮತಿ ಹಾಗೂ ಆರ್‌ಎನ್‌ಆರ್ ಸೇರಿದಂತೆ ವಿವಿಧ ತಳಿಗಳ ಅಕ್ಕಿ ಗೋದಾಮುಗಳಲ್ಲಿ ದಾಸ್ತಾನು ಆಗಿ ಉಳಿದಿದೆ. ಇದರಿಂದಾಗಿ ಭತ್ತದ ಸಂಸ್ಕರಣೆ ಕೂಡ ಶೇ.50ರಷ್ಟು ಮಾತ್ರ ನಡೆಯುತ್ತಿದ್ದು, ದೇಶೀಯ ಮಾರುಕಟ್ಟೆಗೆ ಮಾತ್ರ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ತಿಂಗಳು ರಾಯಚೂರಿನಿಂದ 15 ರೈಲು ರೇಕ್ಗಳಲ್ಲಿ ಸುಮಾರು 37,500 ಟನ್ ಅಕ್ಕಿ ರಫ್ತು ಆಗುತ್ತಿತ್ತು. ಆದರೆ ಯುದ್ಧ ಆರಂಭವಾದ ನಂತರ ಒಂದೇ ಒಂದು ರೇಕ್ಗೂ ಅಕ್ಕಿ ಸಾಗಾಟವಾಗಿಲ್ಲ ಎಂದು ರೈಸ್ ಮಿಲ್ ಮಾಲೀಕರು ಹೇಳಿದ್ದಾರೆ.
ಈ ಪರಿಸ್ಥಿತಿ ಮುಂದುವರಿದರೆ ಭತ್ತ ಖರೀದಿ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದ್ದು, ರೈತರಿಗೂ ಸಂಕಷ್ಟ ಎದುರಾಗುವ ಆತಂಕ ವ್ಯಕ್ತವಾಗಿದೆ.



