ಚಾಮರಾಜನಗರ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ದೇಶದ ಹಲವೆಡೆ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗುತ್ತಿರುವ ಹಿನ್ನೆಲೆ, ಇದರ ಪ್ರಭಾವ ಈಗ ಮಲೆ ಮಹದೇಶ್ವರ ಬೆಟ್ಟಕ್ಕೂ ತಲುಪಿದೆ.
ಯುಗಾದಿ ಜಾತ್ರೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನ್ನದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪ್ರತಿ ದಿನ ಸಾವಿರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅನ್ನದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಇದೇ ವೇಳೆ ಲಾಡು ಪ್ರಸಾದ ತಯಾರಿಕೆಗೆ ಸಹ ಸಾಕಷ್ಟು ಗ್ಯಾಸ್ ಸಿಲಿಂಡರ್ ಅಗತ್ಯವಿರುತ್ತದೆ. ದಿನಕ್ಕೆ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಅನ್ನದಾಸೋಹ ಮತ್ತು ಲಾಡು ತಯಾರಿಕೆಗೆ ಬಳಸಲಾಗುತ್ತಿದೆ. ಸದ್ಯಕ್ಕೆ ಒಂದು ವಾರದವರೆಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಗ್ಯಾಸ್ ಕೊರತೆ ಇದೇ ರೀತಿಯಲ್ಲಿ ಮುಂದುವರಿದರೆ ದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಯನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಪ್ರತಿ ವರ್ಷ ಮೂರು ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಜಾತ್ರಾಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಜಾತ್ರೆಯ ವೇಳೆ ಕೇವಲ ಅನ್ನದಾಸೋಹಕ್ಕೆ ದಿನಕ್ಕೆ 12ರಿಂದ 15 ಸಿಲಿಂಡರ್ ಅಗತ್ಯವಿರುತ್ತದೆ. ಅದೇ ರೀತಿ ಸುಮಾರು 2.5 ಲಕ್ಷ ಲಾಡು ತಯಾರಿಕೆಗೆ ದಿನಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಬಳಸಲಾಗುತ್ತದೆ.
ಗ್ಯಾಸ್ ಸಿಲಿಂಡರ್ ಕೊರತೆ ಮುಂದುವರಿದರೆ ಯುಗಾದಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹ ಸೇವನೆ ಅಲಭ್ಯವಾಗುವ ಸಾಧ್ಯತೆ ಇದೆ. ಈ ಕುರಿತು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಯುದ್ಧದಲ್ಲಿ ಭಾಗಿಯಾಗದ ದೇಶಗಳ ಮೇಲೂ ಪರಿಣಾಮ ಬೀರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.



