ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : 50 ಸಾವಿರ ಜನಸಂಖ್ಯೆ ಹೊಂದಿರುವ ಲಕ್ಷ್ಮೇಶ್ವರ ಸೇರಿ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿಗೆ ತುಂಗಭದ್ರಾ ನದಿಯೇ ಆಧಾರವಾಗಿದೆ. ಆದರೆ ಕಳೆದ 2 ತಿಂಗಳಿಂದ ಕುಡಿಯುವ ನೀರಿಗಾಗಿ ಜನತೆ ಪರಿತಸಪಿಸುತ್ತಿದ್ದರೂ ನೀರೆತ್ತುವ ನದಿ ಪಾತ್ರದಲ್ಲಿ ಅನಧಿಕೃತ ಪಂಪ್‌ಸೆಟ್‌ಗಳು ರಾಜಾರೋಷವಾಗಿ ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ನದಿಗೆ ಅಲ್ಪ ಪ್ರಮಾಣ ನೀರು ಬಿಟ್ಟಿದ್ದರೂ ಆತಂಕ ಮಾತ್ರ ತಪ್ಪದಂತಾಗಿದೆ. ಬೇಸಿಗೆ ವೇಳೆ ರೈತರು ಪಂಪ್‌ಸೆಟ್‌ನಿಂದ ನೀರೆತ್ತದಂತೆ ತಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಮತ್ತು ನದಿ ವ್ಯಾಪ್ತಿಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಜೀವ ಇದ್ದರೆ ಜೀವನ ಎಂದು ಹೇಳುವ ಅಧಿಕಾರಿಗಳು ಪಂಪ್‌ಸೆಟ್ ತೆರವುಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಲು ಅಷ್ಟಾಗಿ ಆಸಕ್ತಿ ತೋರದ್ದರಿಂದ 10 ಹೆಚ್‌ಪಿ ಸಾಮರ್ಥ್ಯದ ಹತ್ತಾರು ಅಕ್ರಮ ಪಂಪ್‌ಸೆಟ್‌ಗಳು ಜಾಕ್‌ವೆಲ್ ನೀರನ್ನೇ ಹಗಲೂ ರಾತ್ರಿ ಎತ್ತುವಳಿ ಮಾಡುತ್ತಿವೆ. ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. 25 ವರ್ಷಗಳ ಹಿಂದೆ ಪ್ರಾರಂಭವಾದ ನದಿ ನೀರಿನ ಯೋಜನೆ ಹತ್ತಾರು ಸಮಸ್ಯೆಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ನೀರಿನ ಬವಣೆ ಉಲ್ಬಣಿಸುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಂತೂ ನಾಲ್ಕೈದು ತಿಂಗಳು ನದಿ ನೀರು ಬರಿದಾಗಿ ಪಟ್ಟಣದಲ್ಲಿ ನೀರಿಗೆ ಹಾಹಾಕಾರ ಉಂಟಾಗುವುದು ಸಾಮಾನ್ಯವಾಗಿದೆ. ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಇತ್ಯಾದಿ ಕಾರಣಗಳಿಂದ ರೈತಾಪಿ ಜನರ ಗೋಳಂತೂ ಹೇಳ ತೀರದು. ಈ ಕಾಲದಲ್ಲಿ ಬೋರ್‌ವೆಲ್‌ನ ಸವಳು ನೀರಿಗೂ ಪರದಾಡುವ ಪರಿಸ್ಥತಿ ಉಂಟಾಗುತ್ತಿದೆ.
ಪ್ರತಿ ಬೇಸಿಗೆಯಲ್ಲಿ ಸಮಸ್ಯೆ ಉಂಟಾಗುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಜಾಣ ಕುರುಡುತನ ವಹಿಸಿದ್ದಾರೆ. ನದಿಯಿಂದ ನೀರೆತ್ತುವ ಜಾಕ್‌ವೆಲ್ ಹತ್ತಿರ ನೀರು ಸಂಗ್ರಹಿಸುವ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಜಾಕ್‌ವೆಲ್‌ಗೆ ಅನಧಿಕೃತ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದರೂ ಯಾರೂ ಕೇಳುವವರಿಲ್ಲ. ಶಾಶ್ವತ ಪರಿಹಾರಕ್ಕೆ ಮತ್ತು ಕೆರೆ ತುಂಬಿಸುವ ಕೋಟ್ಯಾಂತರ ರೂ ಯೋಜನೆ ಸಾಕಾರದ ಬಗ್ಗೆ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ಬೆಳೆಯುತ್ತಿರುವ ಪಟ್ಟಣದ ಜನತೆ ಮತ್ತು ರೈತರು ಜಾನುವಾರುಗಳಿಗೆ ಅಗತ್ಯವಿರುವ ನೀರಿಗಾಗಿ ನಿತ್ಯ ಬಡಿದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಆಡಳಿತ ಇನ್ನಾದರೂ ಎಚ್ಚತ್ತುಕೊಳ್ಳಬೇಕಿದೆ ಎನ್ನುತ್ತಾರೆ ಮಂಜುನಾಥ ಮಾಗಡಿ, ಸುರೇಶ ನಂದೆಣ್ಣವರ ಮುಂತಾದವರು.
ಗದಗ ಸೇರಿ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ ತಾಲೂಕಿಗೆ ತುಂಗಭದ್ರಾ ನದಿ ನೀರೇ ಆಧಾರವಾಗಿದೆ.
ಕುಡಿಯುವ ನೀರಿನ ತೊಂದರೆ ತಪ್ಪಿಸಲು ನದಿ ನೀರು ಬಿಟ್ಟಿದ್ದು, ಮಳೆಗಾಲ ಪ್ರಾರಂಭದವರೆಗೂ ನೀರು ಕಾಪಾಡಬೇಕಾಗಿದೆ. ಬೇಸಿಗೆಯಲ್ಲಿ ನದಿ ಪಾತ್ರದ ರೈತರು ಪಂಪ್‌ಸೆಟ್ ಮೂಲಕ ನೀರೆತ್ತುವುದನ್ನು ತಡೆಯುವಂತೆ ಆಯಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹತ್ತಾರು ಬಾರಿ ಸೂಚಿಸಿದ್ದೇನೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.
– ವೈಶಾಲಿ ಎಂ.ಎಲ್.
ಜಿಲ್ಲಾಧಿಕಾರಿಗಳು, ಗದಗ.



