ಮನೆ ಅಥವಾ ವಾಣಿಜ್ಯ ಬಳಕೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ.
ಸಿಲಿಂಡರ್‌ಗಳ ಮೇಲೆ ನೀಡಲಾಗಿರುವ ‘ಎಕ್ಸ್‌ಪೈರಿ ಡೇಟ್’ ಬಗ್ಗೆ ಅರಿವು ಇರದೇ ಇರುವುದರಿಂದ ಕೆಲವೊಮ್ಮೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲ್ಭಾಗದಲ್ಲಿರುವ ಕಬ್ಬಿಣದ ಪಟ್ಟಿಗಳಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಅಂಕಿಗಳ ಸಂಯೋಜನೆ (ಉದಾ: A-26, B-27, C-28, D-29) ಕಾಣಿಸುತ್ತದೆ. ಇದು ಸಿಲಿಂಡರ್‌ನ ಸುರಕ್ಷತಾ ಪರೀಕ್ಷೆಯ ಅವಧಿಯನ್ನು ಸೂಚಿಸುತ್ತದೆ. ಅಕ್ಷರಗಳು ತಿಂಗಳುಗಳನ್ನು ಸೂಚಿಸುತ್ತವೆ – A (ಜನವರಿ-ಮಾರ್ಚ್), B (ಏಪ್ರಿಲ್-ಜೂನ್), C (ಜುಲೈ-ಸೆಪ್ಟೆಂಬರ್), D (ಅಕ್ಟೋಬರ್-ಡಿಸೆಂಬರ್). ಅಂಕಿಗಳು ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ A-26 ಎಂದರೆ 2026ರ ಮಾರ್ಚ್ ಒಳಗೆ ಸಿಲಿಂಡರ್ ಪರೀಕ್ಷೆಗೆ ಒಳಪಡಿಸಬೇಕು ಎಂದರ್ಥ. ಈ ಅವಧಿ ಕಳೆದ ಬಳಿಕ ಸಿಲಿಂಡರ್ ಬಳಸುವುದು ಅಪಾಯಕಾರಿ.
ಸಿಲಿಂಡರ್ ಸಂಗ್ರಹಿಸುವಾಗ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಗಾಳಿಯಾಡುವ ಜಾಗದಲ್ಲಿ ಇಡುವುದು ಮುಖ್ಯವಾಗಿದ್ದು, ಮುಚ್ಚಿದ ಕಪಾಟು ಅಥವಾ ನೆಲಮಾಳಿಗೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಸಿಲಿಂಡರ್ ಅನ್ನು ಸದಾ ನೆಟ್ಟಗೆ ನಿಲ್ಲಿಸಬೇಕು; ಮಲಗಿಸಿ ಇಡುವುದು ಅಪಾಯಕಾರಿಯಾಗಿದೆ. ಜೊತೆಗೆ ಶಾಖದ ಮೂಲಗಳಿಂದ ಕನಿಷ್ಠ ಒಂದು ಮೀಟರ್ ದೂರದಲ್ಲಿರಿಸಬೇಕು. ಸ್ಟಾಕ್‌ನಲ್ಲಿ ಇಡುವ ಸಿಲಿಂಡರ್‌ಗೆ ಸುರಕ್ಷತಾ ಕ್ಯಾಪ್ ಸರಿಯಾಗಿ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಗ್ಯಾಸ್ ಸೋರಿಕೆ ಕಂಡುಬಂದಲ್ಲಿ ತಕ್ಷಣವೇ ರೆಗ್ಯುಲೇಟರ್ ಆಫ್ ಮಾಡಬೇಕು. ಮನೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ಯಾವುದೇ ಎಲೆಕ್ಟ್ರಿಕ್ ಸ್ವಿಚ್ ಅಥವಾ ಬೆಂಕಿ ಬಳಸದಿರುವುದು ಅತ್ಯಂತ ಮುಖ್ಯ. ಸಿಲಿಂಡರ್‌ಗೆ ಸುರಕ್ಷತಾ ಕ್ಯಾಪ್ ಹಾಕಿ, ಅದನ್ನು ತೆರೆದ ಜಾಗಕ್ಕೆ ಸ್ಥಳಾಂತರಿಸಬೇಕು.
ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಅನಾಹುತಗಳನ್ನು ತಪ್ಪಿಸಿ, ಗ್ಯಾಸ್ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಬಳಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.



