HomeDharwadಉದ್ವೇಗಕ್ಕೆ ಒಳಗಾಗದೇ ಪರೀಕ್ಷೆ ಎದುರಿಸಿ

ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆ ಎದುರಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಗಣನೀಯ ಸಾಧನೆ ಮಾಡುವ ಮತ್ತು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಮಿಷನ್ ವಿದ್ಯಾಕಾಶಿ ಎಂಬ ಹೆಸರಿನಡಿ ಧಾರವಾಡ ಜಿಲ್ಲಾಡಳಿತದಿಂದ ಕಾರ್ಯಕ್ರಮ ರೂಪಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆದು ರಾಜ್ಯದಲ್ಲಿ ಧಾರವಾಡ ಜಿಲ್ಲೆ ಟಾಪ್ 10ರ ಪಟ್ಟಿಯಲ್ಲಿ ಬರಬೇಕು, ಕಲಿಕಾ ಗುಣಮಟ್ಟ ಸುಧಾರಿಸಿ ಆ ಮೂಲಕ ವಿದ್ಯಾಕಾಶಿ ಎಂಬ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯ ಈ ಮಿಷನ್ ವಿದ್ಯಾಕಾಶಿಯದ್ದಾಗಿದೆ.

ಮಾರ್ಚ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಸ್ವತಃ ಧಾರವಾಡ ಜಿಲ್ಲೆಯ ವಿವಿಧ ಹೈಸ್ಕೂಲ್‌ಗಳಿಗೆ ಭೇಟಿ ನೀಡಿ, ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗಷ್ಟೇ ಅಲ್ಲದೇ ಪಾಲಕರ ಜೊತೆಯೂ ಸಂವಾದ ಮಾಡುತ್ತಿದ್ದಾರೆ.

ಫೆ.14ರಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್‌ಗೆ ಭೇಟಿ ನೀಡಿದ ಡಿಸಿ ದಿವ್ಯ ಪ್ರಭು, ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅನೇಕ ಮಕ್ಕಳು ತಮಗಿರುವ ಸಂದೇಹಗಳನ್ನು ಡಿಸಿ ಅವರಿಗೆ ಕೇಳಿ ಬಗೆಹರಿಸಿಕೊಂಡಿದ್ದು ವಿಶೇಷವಾಗಿತ್ತು.

ಎಲ್ಲ ಮಕ್ಕಳು ಕಷ್ಟಪಟ್ಟು ಪ್ರಾಮಾಣಿಕತೆಯಿಂದ ನಿರಂತರವಾಗಿ ಓದಿ, ತಮ್ಮಂತೆ ಜಿಲ್ಲಾಧಿಕಾರಿ ಆಗಬೇಕು. ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆ ಆಗಬೇಕು. ಅಂತಹ ಕನಸು, ಛಲ ಈಗಿನಿಂದಲೇ ಬೆಳೆಸಿಕೊಳ್ಳಬೇಕು. ನೀವು ರಾಜ್ಯಕ್ಕೆ ಉತ್ತಮ ರ‍್ಯಾಂಕ್ ಪಡೆದು, ಒಳ್ಳೆಯ ಅಧಿಕಾರಿ ಆಗಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಹತ್ತಿರ ಬಂದಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಚೆನ್ನಾಗಿ ಓದುವ ವಾತಾವರಣ ಕಲ್ಪಿಸಬೇಕು. ಟಿ.ವಿ, ಮೊಬೈಲ್‌ಗಳಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು. ಪಾಲಕರೂ ಸಹ ಮನೆಯಲ್ಲಿ ಟಿ.ವಿ, ಮೊಬೈಲ್‌ಗಳನ್ನು ಅಗತ್ಯವಿರುವಷ್ಟು ಮಾತ್ರ ಬಳಸಿ, ಮಕ್ಕಳ ಓದಿನ ಕಡೆಗೆ ಗಮನ ಹರಿಸಬೇಕು ಎಂದರು. ಪುಡಕಲಕಟ್ಟಿ, ಕರಡಿಗುಡ್ಡ, ಯಾದವಾಡ ಮತ್ತು ಉಪ್ಪಿನಬೇಟಗೇರಿಯ ವಿವಿಧ ಪ್ರೌಢಶಾಲೆಯ ಶಿಕ್ಷಕರು ತಮ್ಮ ಶಾಲಾ ಮಕ್ಕಳ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಸಹಾಯಕ ಕೃಷಿ ನಿರ್ದೇಶಕ ಅಣಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಶಿಕ್ಷಣ ಸಂಯೋಜಕರಾದ ಬಸವರಾಜ ಛಬ್ಬಿ, ಶ್ರೀಕಾಂತ ಗೌಡರ, ಮುಖ್ಯಾಧ್ಯಾಪಕರಾದ ಪುಡಕಲಕಟ್ಟಿ ಪ್ರೌಢಶಾಲೆಯ ನಾರಾಯಣ ಪತ್ತಾರ, ಕರಡಿಗುಡ್ಡ ಕೆಪಿಎಸ್ ಪ್ರೌಢಶಾಲೆಯ ಉಮಾಕಾಂತ ಕರ್ಚಕಟ್ಟಿ, ಯಾದವಾಡ ಸರಕಾರಿ ಪ್ರೌಢಶಾಲೆಯ ಬಿ.ಬಿ. ದುಬ್ಬನಮರಡಿ, ಉಪ್ಪಿನಬೆಟಗೇರಿ ಎಸ್.ಜಿ.ವಿ. ಪ್ರೌಢಶಾಲೆಯ ಎ.ಎ. ಮುಲ್ಲಾ, ಎಂ.ಜೆ. ಹಳವೂರ ಉರ್ದು ಪ್ರೌಢಶಾಲೆಯ ಯಾಕೂಬ ಜೋರಮನ್ನವರ ಹಾಗೂ ಉಪ್ಪಿನಬೇಟಗೇರಿ ಗ್ರಾ.ಪಂ ಅಧ್ಯಕ್ಷ ಬಸೀರ ಮಾಳಗಿಮನಿ, ಉಪಾಧ್ಯಕ್ಷೆ ಹೆಗಡೆ, ಎಸ್.ಜಿ.ವಿ ಸಂಸ್ಥೆಯ ಚೇರಮನ್ ವೀರಣ್ಣ ಪರಾಂಡೆ, ಗೌರವ ಕಾರ್ಯದರ್ಶಿ ಗಂಗಪ್ಪ ಜವಳಗಿ, ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ರಾಮಲಿಂಗಪ್ಪ ನವಲಗುಂದ, ಮಲ್ಲಪ್ಪ ಅಷ್ಟಗಿ, ಧರೆಪ್ಪ ಬೊಬ್ಬಿ, ನಿಂಗಪ್ಪ ಸಂಕಣ್ಣವರ ಸೇರಿದಂತೆ ಗ್ರಾಮದ ಪ್ರಮುಖರಾದ ಮಹಾವೀರ ಅಷ್ಟಗಿ, ಸುರೇಶಬಾಬು ತಳವಾರ ಹಾಗೂ ಇತರರು ಇದ್ದರು.

ಜೀವನದಲ್ಲಿ ಉನ್ನತ ಗುರಿ ಇರಬೇಕು. ಪ್ರತಿದಿನ ವೇಳಾಪಟ್ಟಿ ಅನುಸಾರ ಅಭ್ಯಾಸ ಮಾಡಬೇಕು. ಕಠಿಣ ಎನಿಸುವ ವಿಷಯಗಳನ್ನು ಮೊದಲು ಓದಬೇಕು. ಒತ್ತಡಕ್ಕೆ, ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ರೂಢಿ ಪರೀಕ್ಷೆಗಳನ್ನು ಬರೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ದೂರವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!