ವಿಜಯಸಾಕ್ಷಿ ಸುದ್ದಿ, ಗದಗ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 8ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನಟರಾಜ ಸವಡಿ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಈ ಹಿಂದಿನ ಂತೆ ಉಚಿತವಾಗಿ ವಿದ್ಯುತ್ ಒದಗಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು.
ಜಲಜೀವನ ಮಿಷನ್ ಅಡಿಯಲ್ಲಿ ಪ್ರತಿ ಹಳ್ಳಿಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ವಿದ್ಯುನ್ಮಾನ ದತ್ತಾಂಶ ಭಂಡಾರ ಮಾಡಿ ಅದರಲ್ಲಿ ರೈತರಿಗೆ ಬೇಕಾದ ಎಲ್ಲ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ಇಡಬೇಕು. ಪ್ರಮಾಣಪತ್ರಗಳನ್ನು ನೀಡಲು ಬೇಕಾಗುವ ದಾಖಲೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಬರುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹಿರೇಮಠ, ನಾಗವೇಣಿ ಕುಡಪಲಿ, ಮೋಹನ್ ಇಬ್ರಾಹಿಮಪುರ, ರೇಖಾ ಜಡಿ, ರುದ್ರಗೌಡ ಪಾಟೀಲ, ಉಮೇಶ್ ಮಾರ್ತಪ್ಪನವರ, ಮಹಾರುದ್ರಯ್ಯ ಲಕ್ಕುಂಡಿ, ಸೋಮಶೇಖರ್ ಕಡಗದ, ಮಹಮ್ಮದ್ ಅಲಿ ಬಾವಾಲೆ, ವಿಶ್ವನಾಥ ಹಿರೇಮಠ, ಸೋಮಶೇಖರ್ ಚಿಳ್ಳಿಮಠ ಮುಂತಾದವರು ಇದ್ದರು.



