ಹೈದರಾಬಾದ್: ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಈ ಹತ್ಯೆ ಮಾರ್ಚ್‌ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚೌಡೇಶ್ವರಿ (22) ಹತ್ಯೆಯಾದ ಮಹಿಳೆ. ಮೃತ ಮಹಿಳೆ, ಯುವಕನೊಬ್ಬನ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇದಕ್ಕೆ ಆಕೆಯ ಕುಟುಂಬಸ್ಥರ ವಿರೋಧವಿತ್ತು. ಮಾ.4 ರಂದು, ಆಕೆ ಮನೆ ಬಿಟ್ಟು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಈ ಸಂಬಂಧ ಕುಟುಂಬಸ್ಥರು ದೂರು ದಾಖಲಿಸಿದ್ದರು.
ಮಾಚೆರ್ಲಾ ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಮಾ.15 ರಂದು ದಂಪತಿಯನ್ನು ಪತ್ತೆಹಚ್ಚಿದ್ದರು. ಬಳಿಕ ಮಹಿಳೆಗೆ ಬೆದರಿಸಿ ಪೋಷಕರ ಮನೆಗೆ ಹಿಂತಿರುಗುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ಮೂರು ದಿನಗಳ ನಂತರ ಪೋಷಕರ ಮನೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ, ಅವರ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೊಂಡಿತ್ತು. ಪೊಲೀಸ್ ಅಧಿಕಾರಿಯ ಸಹಾಯದಿಂದ ಅದನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿಹಾಕಲು ಕುಟುಂಬಸ್ಥರು ಪ್ರಯತ್ನಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ದೃಢಪಟ್ಟಿತ್ತು. ಮಹಿಳೆ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಮಹಿಳೆಯ ತಂದೆ ಚಂದ್ರಶ್ರೀನು ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿ ಮಹಿಳೆಯ ಪೋಷಕರಿಂದ ಲಂಚ ಪಡೆದು ಅವರನ್ನು ರಕ್ಷಿಸಲು ಪ್ರಯತ್ನಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಬ್ಯಾಂಕ್ ದಾಖಲೆಗಳನ್ನು ಮತ್ತು ಕುಟುಂಬದಿಂದ ದೊಡ್ಡ ಪ್ರಮಾಣದ ನಗದು ವಿತ್‌ಡ್ರಾ ಮಾಡಿರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ.



