ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇತ್ತೀಚಿನ ಅಧ್ಯಯನವು ತಂದೆಯ ಧೂಮಪಾನದ ಅಭ್ಯಾಸವು ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಈ ಅಧ್ಯಯನವು “ಜರ್ನಲ್ ಆಫ್ ದ ಎಂಡೋಕ್ರೈನ್ ಸೋಸೈಟಿ”ಯಲ್ಲಿ ಪ್ರಕಟಗೊಂಡಿದ್ದು, ತಂದೆ ಧೂಮಪಾನ ಮಾಡುವವರಾಗಿದ್ದರೆ ಅವರ ಮಕ್ಕಳಲ್ಲಿ ಟೈಪ್-2 ಮಧುಮೇಹ, ಲಿವರ್ ಸಮಸ್ಯೆಗಳು ಸೇರಿದಂತೆ ಹಲವು ಮೆಟಾಬಾಲಿಕ್ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂದು ತಿಳಿಸಿದೆ.
ಅಧ್ಯಯನದ ಪ್ರಕಾರ, ಧೂಮಪಾನ ಮಾಡುವ ಪುರುಷರ ಸ್ಪರ್ಮ್‌ನಲ್ಲಿ ಉಂಟಾಗುವ ಬದಲಾವಣೆಗಳು ಮಗುವಿನ ದೇಹದ ಶುಗರ್ ಮೆಟಾಬಾಲಿಸಮ್ ಹಾಗೂ ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 1000 ಧೂಮಪಾನಿಗಳ ಮೇಲೆ ನಡೆದ ಈ ಅಧ್ಯಯನದಲ್ಲಿ, ಅವರ ಮಕ್ಕಳಲ್ಲಿ ಸುಮಾರು 30% ಮಂದಿಗೆ ಮಧುಮೇಹದ ಲಕ್ಷಣಗಳು ಹಾಗೂ ಲಿವರ್ ಸಮಸ್ಯೆಗಳು ಕಂಡುಬಂದಿವೆ.
ಇದಲ್ಲದೆ, ಧೂಮಪಾನದ ವೇಳೆ ದೇಹಕ್ಕೆ ಸೇರುವ ನಿಕೋಟಿನ್ ಮೆಟಾಬಾಲಿಸಮ್ ಸಂಬಂಧಿತ ಪ್ರಮುಖ ಪ್ರಕ್ರಿಯೆಗಳನ್ನು ಹಾನಿಗೊಳಿಸಿ, ಇನ್ಸುಲಿನ್ ಕಾರ್ಯವಿಧಾನವನ್ನು ಬದಲಾಯಿಸುತ್ತದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಮಕ್ಕಳಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಆದರೆ ಈ ಅಧ್ಯಯನ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಹೆಚ್ಚಿನ ಮಟ್ಟದ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ತಂದೆಯಾಗಲು ಬಯಸುವವರು ಧೂಮಪಾನದಿಂದ ದೂರವಿರುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.



