HomeGadag Newsದೇಶದ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳಿ : ಗೋವಿಂದರೆಡ್ಡಿ

ದೇಶದ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳಿ : ಗೋವಿಂದರೆಡ್ಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೊರಬಂದು ಯುವ ಜನರು ಆಸಕ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕರೆ ನೀಡಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗದಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಆರೋಗ್ಯ ಸಂಪತ್ತು ಅತ್ಯಮೂಲ್ಯ. ಇಂದಿನ ದಿನಮಾನದಲ್ಲಿ ಎಲ್ಲರಿಗೂ ಕಾಯಿಲೆಗಳು ಹೆಚ್ಚಾಗಿದ್ದು, ಇದಕ್ಕೆ ಮೂಲ ಕಾರಣ ನಾವು ದೈಹಿಕವಾಗಿ ಯಾವುದೇ ರೀತಿಯ ಕೆಲಸ ಮಾಡದಿರುವುದು.

ಹಾಗಾಗಿ ಯುವ ಜನತೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕವಾಗಿ ಶಕ್ತಿಯುತರಾಗಿ ದೇಶದ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳಬೇಕು ಎಂದು ಹೇಳಿದರು.

Flag Hoisting of Gadag District Level Dussehra Games

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಕ್ರೀಡಾ ಇಲಾಖೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಬಂದಿರುವ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಗೆದ್ದು, ವಿಭಾಗ ಮಟ್ಟದಲ್ಲಿ ಉತ್ತಮವಾಗಿ ಆಟ ಆಡಿ ರಾಜ್ಯಮಟ್ಟದಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂದು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಪ್ರತಿ ವರ್ಷದಂತೆ ಈ ವರ್ಷವೂ ನಾಡಿನ ಎಲ್ಲಾ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಸಿಗಬೇಕು ಎಂದು ಯಾವುದೇ ರೀತಿಯ ವಯಸ್ಸಿನ ಮಿತಿ ಹಾಕದೇ ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವನ್ನು ನೀಡಿ, ದಸರಾ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರೋಣ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ವಿವಿಧ ತಾಲೂಕುಗಳ ದೈಹಿಕ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ವೆಂಕಟೇಶ ಆಲ್ಕೋಡ ಮತ್ತು ತಂಡದವರು ಸಂಗೀತ ಪ್ರಸ್ತುತಪಡಿಸಿದರು. ಎಂ.ಎಸ್. ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಎಂ.ಡಿ. ತಳ್ಳಳ್ಳ ವಂದಿಸಿದರು.

ಈಗಾಗಲೇ ಜಿಲ್ಲೆಯಲ್ಲಿನ ಏಳು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿ, ಅದರಲ್ಲಿ ಗೆದ್ದವರಿಗೆ ಇಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಿದೆ. ಸೆಪ್ಟೆಂಬರ್ ೨೮ರಂದು ಬೆಳಗಾವಿ ವಿಭಾಗ ಮಟ್ಟದ ಹಾಕಿ, ಪುಟ್ಬಾಲ್ ಮತ್ತು ಕಬ್ಬಡ್ಡಿ ಕ್ರೀಡಾಕೂಟವೂ ನಮ್ಮ ಜಿಲ್ಲೆಯಲ್ಲಿಯೇ ನಡೆಯುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಸರಿಯಾಗಿ ಆಟ ಆಡಿ ಗೆಲುವನ್ನು ಕಂಡು ಮೈಸೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕೆಂದು ಶರಣು ಗೋಗೇರಿ ನುಡಿದರು.

ಕ್ರೀಡೆಯಲ್ಲಿ ಸೋತೆವು ಎಂದು ದುಃಖಿತರಾಗದೇ, ಸೋಲುವುದಕ್ಕೆ ಕಾರಣವನ್ನು ತಿಳಿದು ಪರಾಮರ್ಶೆ ಮಾಡಿ ಮುಂದೆ ಬರುವ ಪಂದ್ಯಗಳಿಗೆ ಉತ್ತಮ ತಯಾರಿ ನಡೆಸಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟ ಆಡಿ, ಗುಂಪು ಆಟದಲ್ಲಿ ಯಾವ ರೀತಿ ಎಲ್ಲರೊಂದಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕು.
– ಗೋವಿಂದರೆಡ್ಡಿ.
ಜಿಲ್ಲಾಧಿಕಾರಿಗಳು, ಗದಗ.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!