ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸಕ್ತ ಸಾಲಿನ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಕನೆಕ್ಟ್-2025ರ ಅಂಗವಾಗಿ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದೊಂದಿಗೆ ಗದಗ ಜಿಲ್ಲೆಯ ಮಹಾತ್ಮಗಾಂಧಿ ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ `ಕನೆಕ್ಟ್-2025’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕನೆಕ್ಟ್-2025 ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿಯೇ ಗದಗ ಜಿಲ್ಲೆ ಒಂದು ಉತ್ತಮ ಪ್ರವಾಸಿ ಸ್ಥಾನವಾಗಿದೆ. ಕೃತಪುರ ಎಂಬ ನಗರ ಕಲ್ಯಾಣಚಾಲುಕ್ಯರು, ರಾಷ್ಟ್ರಕೂಟರು, ಕುಮಾರವ್ಯಾಸರ ಕಾಲದಿಂದಲೂ ವೀರನಾರಾಯಣ ದೇವಾಲಯ, ತ್ರಿಕೂಟೇಶ್ವರ ದೇವಾಲಯ, ಕಲೆ, ಶಿಲ್ಪಕಲೆ, ಆಕರ್ಷಣೀಯ ಕೆತ್ತನೆ ನೋಡುಗರ ಗಮನ ಸೆಳೆಯುತ್ತವೆ. ಅದು ಈಗ ಗದಗ ಎಂಬ ಹೆಸರಿನ ಜಿಲ್ಲೆಯಾಗಿದ್ದು, ಇದೊಂದು ಐತಿಹಾಸಿಕ ಸ್ಥಳವಾಗಿದೆ ಎಂದರು.
ರಾಜ್ಯದಲ್ಲಿ 460 ಪ್ರವಾಸಿ ಸ್ಥಾನಗಳಲ್ಲಿ ಗದಗ ಜಿಲ್ಲೆಯಲ್ಲಿಯೇ 48 ಪ್ರವಾಸಿ ಸ್ಥಾನಗಳನ್ನು ಗುರುತಿಸಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಹಣ ಹೂಡಿಕೆ ಮಾಡುವ ಸಂಸ್ಥೆಗಳು ಮತ್ತು ಏಜೆನ್ಸಿಗಳು ಗದಗ ಜಿಲ್ಲೆಯಲ್ಲಿನ ಕನೆಕ್ಟ್-2025 ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಗದಗ ಮಧ್ಯಭಾಗದಲ್ಲಿರುವ 108 ಅಡಿಯ ಬಸವಣ್ಣನವರ ಏಕತೆ ಸಾರುವ ಮೂರ್ತಿಯನ್ನು ನೋಡಲು ಸಾವಿರಾರು ಜನರು ಪ್ರತಿದಿನ ಆಗಮಿಸುತ್ತಾರೆ. ಭೀಷ್ಮ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ಥಳೀಯರು, ಸುತ್ತಮುತ್ತಲಿನ ಜಿಲ್ಲೆಯವರು ಇದರ ಅನುಭವವನ್ನು ಪಡೆಯುತ್ತಿದ್ದಾರೆ ಎಂದರು.
ಗದಗ ಬಿಂಕಡಕಟ್ಟಿಯ ಮೃಗಾಲಯವನ್ನು ವಿಸ್ತರಿಸಿ ಸಾರ್ವಜನಿಕರ ಆಕರ್ಷಣೆಯಾಗಿಸಲು ಅಭಿವೃದ್ಧಿ ಮಾಡಲಾಗುತ್ತಿದೆ. ಜೊತೆಗೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಜಿಪ್ ಲೈನ್ ಅಳವಡಿಕೆ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಮ ಪಾಷಾ, ಕೆಎಸ್‌ಎಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರ, ಪ್ರಶಾಂತ್ ಸಂಕಿಣಮಠ, ವಿವಿ ಕುಲಸಚಿವ ಡಾ. ಸುರೇಶ್ ನಾಡಗೌಡರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಎಸ್.ಎನ್. ಬಳ್ಳಾರಿ, ಲಕ್ಕುಂಡಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ, ದಾಸನೂರ, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಗದುಗಿನ ಕಪ್ಪತಗುಡ್ಡವು ಉತ್ತರ ಕರ್ನಾಟಕದ ಸಹ್ಯಾದ್ರಿ ಸಾಲುಗಳನ್ನು ಹೊಂದಿದ ಅತ್ಯಂತ ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ಕಪ್ಪತಗಿರಿಯಲ್ಲಿ ಸಫಾರಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ದೊರೆಯುವ ಗಿಡಮೂಲಿಕೆಗಳು, ಔಷಧಿಯುಕ್ತ ಸಸ್ಯಗಳಷ್ಟೇ ಅಲ್ಲದೆ, ಏಷ್ಯಾ ಖಂಡದಲ್ಲಿಯೇ ಕಪ್ಪತಗಿರಿಯಲ್ಲಿ ಅತ್ಯಂತ ಶುದ್ಧ ಗಾಳಿ ಇರುವ ವಾತಾವರಣ ನಮ್ಮ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.



