HomeArt and Literature`ಗಂಜಿ’ಯಾದ ಗಂಜಿ ಬಸವಣ್ಣ

`ಗಂಜಿ’ಯಾದ ಗಂಜಿ ಬಸವಣ್ಣ

For Dai;y Updates Join Our whatsapp Group

Spread the love

ಗದಗ ಅನೇಕ ವೈಶಿಷ್ಟ್ಯಗಳಿಂದ ಕೂಡಿದ ಸಾಂಸ್ಕೃತಿಕ ನಗರ. ಅನೇಕ ಕವಿ ಪುಂಗವರು, ಮಹಾಮಹಿಮರು, ಕಲಾವಿದರು ಜನಿಸಿ ಆಯಾ ಕ್ಷೇತ್ರಗಳಲ್ಲಿ ತಮ್ಮತನ ಮೆರೆದ ಸ್ಥಳವಾಗಿದ್ದು, ಅನೇಕ ದೇವಾಲಯಗಳಿಂದ ಕಂಗೊಳಿಸುತ್ತಿದೆ. ಶ್ರೀ ತೋಂಟದಾರ್ಯ ಮಠ, ಶ್ರೀ ಪಂಚಾಕ್ಷರಿ ಗವಾಯಿಗಳವರ ಮಠ, ಶ್ರೀ ಶಿವಾನಂದ ಮಠ, ಶ್ರೀ ತ್ರಿಕೂಟೇಶ್ವರ, ಶ್ರೀ ವೀರನಾರಾಯಣ ದೇವಸ್ಥಾನ ಹೀಗೆ ಅನೇಕ ಮಠಮಾನ್ಯಗಳಿಂದ ಕೂಡಿದ್ದು ನಗರದಲ್ಲಿ ನೂರಾರು ಜಾತ್ರೋತ್ಸವಗಳು, ಜಯಂತಿಗಳು, ಧಾರ್ಮಿಕ ಸಭೆ ಸಮಾರಂಭಗಳು, ನಮ್ಮ ಸಂಸ್ಕೃತಿ-ಸಂಪ್ರದಾಯಗಳ ಅರಿವನ್ನು ಮೂಡಿಸುವ, ಸಮಾಜದಲ್ಲಿ ಶಾಂತಿ ಸುಭಿಕ್ಷೆಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಅನೇಕ ಸಂಪ್ರದಾಯಯುತ ಜಾತ್ರೆಗಳಲ್ಲಿ ನಗರದ ಉಸುಗಿಗಟ್ಟಿ ಓಣಿಯ ಶ್ರೀ ಗಂಜಿ ಬಸವೇಶ್ವರ ಜಾತ್ರೆಯೂ ಸಹ 63 ವರ್ಷಗಳಿಂದಲೂ ತನ್ನ ಪರಂಪರೆಯನ್ನು ಕಾಯ್ದುಕೊಂಡು ಬಂದಿದೆ.

ಸಂಪ್ರದಾಯ-ಸಂಸ್ಕೃತಿ ಮಾನವನ ಸ್ಮೃತಿ ಎನ್ನುವಂತೆ ಈಗ ಶ್ರೀ ಗಂಜಿ ಬಸವೇಶ್ವರ ನೆಲೆಸಿರುವ ಸ್ಥಳದಲ್ಲಿ ನೂರಾರು ವರ್ಷಗಳ ಹಿಂದೆ ಹಳ್ಳವೊಂದು ಹರಿಯುತ್ತಿತ್ತು. ಪೂರ್ಣ ಜಲಾವರಣಗೊಂಡ ಈ ಪ್ರದೇಶವೆಲ್ಲ ಉಸುಗಿನಿಂದ ಕೂಡಿತ್ತು. ಅಲ್ಲಲ್ಲಿ ಗಂಜಿ ಪಾಳ್ಯಗಳಿದ್ದು, ಉಸುಗಿನ ಹಳ್ಳವೆಂದೇ ಕರೆಯುತ್ತಿದ್ದರಂತೆ. ಈ ಹಳ್ಳವು ಮುಂದೆ ಹಂದಿಗೋಳ ಅಂದರೆ ಗಂಗಿಮಡಿ ರಸ್ತೆಗುಂಟ ಹರಿಯುತ್ತ ಅಲ್ಲಿರುವ ಹಳ್ಳವನ್ನು ಸೇರುತ್ತಿತ್ತಂತೆ. ಅಲ್ಲಿ ಅಗಸರೇ ಬೀಡು ಬಿಟ್ಟಿದ್ದು, ಆ ಪ್ರದೇಶವನ್ನು ಅಗಸನಹಳ್ಳಿ ಎಂದು ಕರೆಯುತ್ತಿದ್ದರಂತೆ.

ಆದರೆ ಒಂದು ದಿನ ಈ ಪ್ರದೇಶದಲ್ಲಿರುವ ಗಂಗಮ್ಮ ಎಂಬ ಮಹಾಸಾಧ್ವಿಯು ತನ್ನ ಮಾನರಕ್ಷಣೆಗಾಗಿ ಈ ಹಳ್ಳದಲ್ಲಿ ಹಾರಿ ಮಡಿದಳಂತೆ. ಹಾಗಾಗಿ ಅಂದಿನಿಂದ ಈ ಪ್ರದೇಶವನ್ನು ಗಂಗಿಮಡಿ ಎಂದೇ ಕರೆಯುತ್ತ ಬಂದರು. ತದನಂತರ ಅಲ್ಲಿದ್ದ ಅಗಸ ಜನ ಬೇರೆಡೆ ವಲಸೆ ಹೋದರಂತೆ. ಅದರಂತೆ ಈ ಹಳ್ಳವನ್ನು ಕೂಡುತ್ತಿದ್ದ, ಸಧ್ಯಕ್ಕೆ ನಾವಿರುವ ಈ ಉಸುಕಿನ ಹಳ್ಳದಲ್ಲಿ ಆಗ ಅಕಸ್ಮಾತ್ ಒಂದು ದಿನ ಗಂಜಿ ಹಾಕುತ್ತಿದ್ದ ಅಗಸನೋರ್ವನಿಗೆ ನಂದಿ ವಿಗ್ರಹವೊಂದು ದೊರಕಿತು. ಅಗಾಧವಾದ ಈ ವಿಗ್ರಹವನ್ನು ಕಂಡು ಮುಗ್ದಜೀವಿ ಅಗಸನು ತನ್ನದೇ ಆದ ಗ್ರಾಮ್ಯ ಭಾಷೆಯಲ್ಲಿ ಭಾವೋನ್ಮತ್ತನಾಗಿ ಹಳ್ಳದ ಜನರೆಲ್ಲರನ್ನೂ ಕೂಗಿ ಕೂಗಿ ಕರೆದು ವಿಗ್ರಹ ದೊರೆತ ಸುದ್ದಿಯನ್ನು ಎಲ್ಲ ಕಡೆಗೂ ಪಸರಿಸಿದ. ನಂದಿ ವಿಗ್ರಹ ಕಂಡು ಪುಳಕಿತಗೊಂಡ ಇಲ್ಲಿನ ಸಾಮಾನ್ಯ ಜನ, ಅಸಾಮಾನ್ಯವಾದ ಈ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಪೂಜಿಸಿ ಬಸವಭಕ್ತರಾದರು. ಅಂದಿನಿಂದ ಈ ಬಸವಣ್ಣ ಉಸುಕಿನ ಹಳ್ಳದ ಸ್ಥಳದಲ್ಲಿ ಉಕ್ಕಿನ ಬುನಾದಿಯನ್ನೇ ಹಾಕಿ ನೆಲೆನಿಂತ.

ಗಂಜಿ ಹಾಕುವವರಿಗೆ ದೊರೆತ ಈ ಬಸವಣ್ಣ ಗಂಜೀ ಬಸವಣ್ಣನೆಂದು ಪ್ರಭಾವಳಿಗೊಂಡನು. ತನ್ನ ನಂಬಿದ ಭಕ್ತರಿಗೆ ಸಾಕಷ್ಟು ಗಂಜಿ ನೀಡುತ್ತಾನೆ ಎಂದು ಜನ ಭಕ್ತಿ ಭಾವ ಮೆರೆದರು. ಈ ಉಸುಕಿನ ಹಳ್ಳದಲ್ಲಿ ವಾಸಿಸುವ ಜನ ಪ್ರದೇಶವನ್ನು ಉಸುಗಿನಗಟ್ಟಿ ಎಂದೇ ಕರೆಯುತ್ತಾ ಬಂದರು.

ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೂ ಹಳ್ಳದ ಈ ಬಸವನನ್ನು ಅರಾಧಿಸುತ್ತ ಬಂದರು. ಈಗಲೂ ಪ್ರತಿ ಸೋಮವಾರಕ್ಕೊಮ್ಮೆ ನಗರದ ಅನೇಕ ಕಡೆಗಳಿಂದ ಹಾಗೂ ವಿವಿಧ ಹಳ್ಳಿಗಳಿಂದ ನೂರಾರು ಜನ ಬಂದು ಬಸವಣ್ಣನನ್ನು ಆರಾಧಿಸುತ್ತಾರೆ. ಕಾಯಕಯವೇ ಕೈಲಾಸವೆಂದು ಬಸವನನ್ನು ನಂಬಿ ದುಡಿಯುವ ರೈತರಂತೂ ಶ್ರೀ ಗಂಜಿ ಬಸವನನ್ನು ಪೂಜಿಸಿದರೇನೇ ನಮಗೆ ಈ ವರ್ಷ ಸಾಕಷ್ಟು ಗಂಜಿ ಕೊಡುತ್ತಾನೆ ಎಂದು ನೂರಾರು ವರ್ಷಗಳಿಂದಲೂ ನಂಬಿಕೊಂಡು ಬಂದಿದ್ದಾರೆ.

ರೈತರು ಒಂದಡೆ ಸೇರಿ ಬಿಡುವಿನ ವೇಳೆಯಲ್ಲಿ ಈ ಗಂಜಿ ಬಸವಣ್ಣನನ್ನು ಆರಾಧಸುತ್ತಾ ಪ್ರತಿ ವರ್ಷಕ್ಕೊಮ್ಮೆ ಒಂದು ಬೃಹತ್ ಉತ್ಸವದಂತೆ ಆಚರಿಸುತ್ತಾ ಆಚರಿಸುತ್ತಾ ರಥೋತ್ಸವ ಎಂಬ ಸಂಪ್ರದಾಯವನ್ನು ರೂಢಿಸಿಕೊಂಡು ಬಂದು ಇಂದಿಗೆ 33 ವರ್ಷಗಳು ಸಂದಿವೆ. ಕೆಲವೇ ಕೆಲವು ನಿರ್ದಿಷ್ಟ ಭಕ್ತರಿಂದ ಕೂಡಿದ್ದ ಈ ರಥೋತ್ಸವವು ಇಂದು ಸಾವಿರಾರು ಭಕ್ತಾಧಿಗಳಿಂದ ನಮ್ಮೂರ ರಥೋತ್ಸವ ಎಂದು ಜರುಗುತ್ತಿದೆ. ಆರ್ಥಿಕವಾಗಿ ಜನರು ಅಂದು ವಿಚಾರಿಸುತ್ತಲೇ ಇರಲಿಲ್ಲ. ಗಂಜೀ ಬಸವನ ರಥೋತ್ಸವದ ತೇರು ಕಟ್ಟಲು ಬಂದವರಿಗೆ, ಡೊಳ್ಳು ಮೋಜಿನವರಿಗೆ, ಪರ ಊರಿನಿಂದ ಬಂದ ಭಕ್ತರಿಗೆ ತಮ್ಮ ಮನೆಯಲ್ಲಿದ್ದ ಗಂಜಿಯನ್ನು ಉಣಬಡಿಸಿ ತಾವೇ ಉಂಡಷ್ಟು ಸಂತೃಪ್ತಗೊಳ್ಳುತ್ತಿದ್ದರಂತೆ. ಜಾತ್ರೆಯ ದಿನವಂತೂ ಇವರಿಗೆ ಬಿಸಿ ಬಿಸಿ ಹೋಳಿಗೆ, ಮೋದಕ ಉಣಬಡಿಸುತ್ತಿದ್ದಂತೆ. ಗಂಜಿ ಬಸವನ ಭಕ್ತರಿಗೆ ಗಂಜಿ ನೀಡಿದರೆ ನಮ್ಮ ಮನೆಯಲ್ಲಿ ಗಂಜಿಗೆ ಬರವಿಲ್ಲವೆಂದು ಜನ ಈಗಲೂ ನಂಬಿಕೊಂಡು ಬಂದಿದ್ದಾರೆ. ಜಾತ್ರೆಯೆಂದರೆ ಕೇವಲ ಹೂವು, ಹಣ್ಣು-ಕಾಯಿ ಏರಿಸುವುದಷ್ಟೇ ಅಲ್ಲ, ಅಂದು ಹುರುಪಿನ ದೇಹ ಮತ್ತು ಮನಸ್ಸಿಗೆ ಹೊಸ ನಗುವಿನ ಬಟ್ಟೆ ಧರಿಸಿ ಬಂಧು-ಬಳಗ ಕರೆಯಿಸಿ ಗಂಜೀ ಬಸವನಿಗೆ ಹೂಕಾಯಿ ಅರ್ಪಿಸಿ ಕೂಡಿ ಉಣ್ಣುವ ಒಂದು ದೊಡ್ಡ ಸಡಗರದ ಹಬ್ಬವಿದು ಎಂದು ಭಕ್ತರು ಭಾವುಕರಾಗಿ ಆಚರಿಸುತ್ತಾರೆ.

ಬರಬರುತ್ತಾ ಈ ಜಾತ್ರೆ ಮಾಡಿದರಷ್ಟೇ ಸಾಲದು, ಶರಣ ಶರಣೆಯರ ವಚನ ಪಠ ನಡೆಯಬೇಕು, ಅನ್ನದಾಸೋಹ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕೆಂದು ಇಲ್ಲಿಯ ಜನ ಜಾತ್ರೆಗೆ ಮುಂಚೆ ಆರು ದಿನಗಳ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದರು. ಅದು ಇಂದಿಗೂ ನಡೆದುಕೊಂಡು ಬಂದಿದ್ದು ಸುತ್ತಾರ್ಯಾ. ಹೊಟ್ಟೆಗೆ ಗಂಜೀ ನೀಡುವ ಬಸವಣ್ಣ ಇಂದು ಎಲ್ಲರ ನೆತ್ತಿಗೂ ಜ್ಞಾನದ ಗಂಜಿಯನ್ನು ನೀಡುತ್ತಿದ್ದಾನೆ ಎಂದು ನಂಬಿಕೊಂಡು ಬಂದರು. ಜೊತೆಗೆ ವಿಶ್ವಗುರು ಬಸವಣ್ಣನವರ ಮತ್ತು ಜ. ಏಕೋರಾಮರಾಧ್ಯರ ಜಯಂತಿಯನ್ನೂ ಸಹ ಭಾವಚಿತ್ರಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಜೋಡಿ ಎತ್ತುಗಳ ಶೃಂಗಾರದೊಂದಿಗೆ ಮೆರವಣಿಗೆ ಮಾಡುವುದರ ಮೂಲಕ ಜನಪದ ಕಲಾಮೇಳಗಳ ಆಂದೋಲಿಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದರು.

ಕೆಲವೇ ಕೆಲವು ಭಕ್ತರಿಂದ ಕೂಡಿದ್ದ ಗಂಜೀ ಬಸವಣ್ಣನ ಆರಾಧನೆ ಇಂದು ಎಣಿಕೆಗೆ ಬಾರದಷ್ಟು ಬಹು ವಿಜೃಂಭಣೆಯಿಂದ ನಡೆಯುತ್ತಿದೆ. ಸಾವಿರಾರು ಭಕ್ತಮಣಿಗಳ ದೇಣಿಗೆಯಿಂದ ದೇವಸ್ಥಾನದ ಗೋಪುರ ನಿರ್ಮಾಣ ಮತ್ತು ಬಸವಣ್ಣ ಮೂರ್ತಿಯನ್ನು ದೇವಸ್ಥಾನದ ಮೇಲೆ ಪ್ರತಿಷ್ಠಾಪಿಸಿ ಇಡೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಮಾಡಿಸಿದ್ದು ಗಂಜೀ ಬಸವಣ್ಣನ ಮಹಿಮೆಯೇ ಸರಿ.

ಹೀಗೆ ಗಂಜಿ ಬಸವಣ್ಣ ತನ್ನ ಮಹಿಮೆಯಿಂದ ಇಂದು ಉಸುಗಿನ ಹಳ್ಳವನ್ನು ಉಸುಗಿನಗಟ್ಟಿ ಓಣಿ ಎಂದು ಸೊಗಸಾಗಿ ಪರಿವರ್ತಿಸಿ ಗದಗ ನಗರದಲ್ಲಿ ಪ್ರಮುಖವಾದ ಹಿರಿಮೆಯನ್ನು ಅಭಯಹಸ್ತವನ್ನಾಗಿ ನೀಡಿದ್ದಾನೆ. ಇಂದು ಈ ಬಸವನ ಜಾತ್ರೆಯು ನಮ್ಮೂರ ರಥೋತ್ಸವ ಹೆಸರಿನಿಂದ ಹೊಳೆಯುತ್ತಿದೆ. ಇಂತಹ ಗಂಜಿ ನೀಡುವ ಬಸವಯ್ಯನ ಜಾತ್ರೆಗೆ ತಮಗೆಲ್ಲರಿಗೂ ಭಕ್ತಿಪೂರ್ವಕ ಸ್ವಾಗತ.

– ಜಿ.ಬಿ.ಹಾವಣಗಿ, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!