ವಿಜಯಸಾಕ್ಷಿ ಸುದ್ದಿ, ಮುಳಗುಂದ: ಗುಣಮಟ್ಟದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದು ರಾಜೇಶ್ವರಿ ಬಡ್ನಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ ಮಕ್ಕಳು ಹೊರ ಸಂಚಾರಕ್ಕಾಗಿ ರಾಜೇಶ್ವರಿ ಗಾಣದ ಎಣ್ಣೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಣದ ಎಣ್ಣೆಯ ಮಹತ್ವ ವಿವರಿಸಿ ಮಾತನಾಡಿದರು.
ಹಸಿವು ನೀಗಲೆಂಬ ಕಾರಣಕ್ಕಾಗಿ ಆಹಾರ ಸೇವಿಸುವ ಬದಲು ಉತ್ತಮ ಆರೋಗ್ಯ ಹೊಂದಲು ಉತ್ತಮ ಆಹಾರ ಸೇವನೆ ಮಾಡಬೇಕು. ಈ ವಿಚಾರದಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಹೆಚ್ಚು ಒತ್ತು ಕೊಟ್ಟು ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಿದ್ದರು. ಆಧುನಿಕತೆ ಬೆಳೆದಂತೆ ಇಂದು ಮನೆಯ ಆಹಾರ ಬಿಟ್ಟು ಹೊರಗಡೆ ತಯಾರಿಸುವ ಆಹಾರಕ್ಕೆ ಮಾರು ಹೋಗಿ ನಮ್ಮ ಆರೋಗ್ಯವನ್ನು ನಾವು ಹಾಳುಮಾಡಿಕೊಳ್ಳುತ್ತಿದ್ದೇವೆ ಎಂದರು.
ಶಿಕ್ಷಕಿ ವೀಣಾ ಕಂಠಿ ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲಾ ಮಕ್ಕಳ ಹೊರ ಸಂಚಾರ ಸಹಕಾರಿಯಾಗಿದ್ದು, ಶುದ್ಧ ಗಾಣದ ಎಣ್ಣೆಯ ನಿತ್ಯ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಸಿಆರ್ಪಿ ಎಂ.ಎಂ. ನಿಂಬನಾಯ್ಕರ, ಎಂ.ಎಂ. ಮೇಗಲಮನಿ, ಎಸ್.ಡಿ. ಪಂಡಿತ, ವಿ.ಡಿ. ಸಿದ್ದನಗೌಡರ ಇದ್ದರು.



