ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದ್ದು, ನಗರದ ಪಿಂಕ್ ಲೈನ್ ಮೆಟ್ರೋ ಸಂಚಾರ ಮೇ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಪಿಂಕ್ ಲೈನ್ ಮೆಟ್ರೋವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ಆರಂಭಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಆರ್‌ಡಿಎಸ್‌ಓ ವತಿಯಿಂದ ವಿವಿಧ ತಾಂತ್ರಿಕ ತಪಾಸಣೆಗಳು ನಡೆಯಲಿವೆ. ಈ ವೇಳೆ ರೈಲಿನ ವೇಗ ಮತ್ತು ಲೋಡ್ ಟೆಸ್ಟ್, ಟ್ರ್ಯಾಕ್ ಪರಿಶೀಲನೆ, ಸ್ಟೇಷನ್‌ಗಳ ಪರಿಶೀಲನೆ ಹಾಗೂ ಪವರ್ ಸಿಸ್ಟಮ್‌ಗಳ ಚೆಕ್ಕಿಂಗ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.
ಈ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡ ಬಳಿಕ, ರೈಲ್ವೆ ಮಂಡಳಿಯಿಂದ ತಾಂತ್ರಿಕ ಅನುಮೋದನೆ ಪಡೆಯಲು ಬಿಎಂಆರ್‌ಸಿಎಲ್ ವರದಿಯನ್ನು ಸಲ್ಲಿಸಲಿದೆ. ಅಂತಿಮ ಹಂತದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆಸಲಾಗುತ್ತದೆ. ಸುರಕ್ಷತಾ ಅನುಮೋದನೆ ದೊರೆತ ಬಳಿಕ ಪಿಂಕ್ ಲೈನ್ ಮೆಟ್ರೋವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.
ಒಟ್ಟು 21.26 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಮೊದಲ ಹಂತವಾಗಿ 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗವನ್ನು ತಾವರೆಕೆರೆ ಮತ್ತು ಕಾಳೇನ ಅಗ್ರಹಾರ ನಡುವೆ ಆರಂಭಿಸಲಾಗುತ್ತದೆ. ಉಳಿದ 13 ಕಿಲೋಮೀಟರ್ ಅಂಡರ್‌ಗ್ರೌಂಡ್ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ಈ ಮೂಲಕ ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆ ಮತ್ತಷ್ಟು ವೇಗ ಪಡೆಯುತ್ತಿದ್ದು, ಸಾರ್ವಜನಿಕರಿಗೆ ಸಂಚಾರ ಸುಲಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.



