HomeGadag Newsನಾಡು ಕಂಡ ಅಪರೂಪದ ಗಾನಕೋಗಿಲೆ ಗೌರಮ್ಮ

ನಾಡು ಕಂಡ ಅಪರೂಪದ ಗಾನಕೋಗಿಲೆ ಗೌರಮ್ಮ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಾನಪದ ಸಾಮಾನ್ಯವಾಗಿ ಅನಕ್ಷರಸ್ಥರ ಜ್ಞಾನವಾಗಿದೆ. ಇದರಲ್ಲಿ ಆಡುಮಾತಿನ ಸೊಗಸಿದೆ. ಅದು ಸರಳ ಸ್ಪಷ್ಟತೆಯಿಂದ ಕೂಡಿದೆ. ಅಕ್ಷರದ ಅರಿವು ಇಲ್ಲದಿದ್ದರೂ ಸಾವಿರಾರು ಹಾಡುಗಳನ್ನು ಹೇಳುವ ಗೌರಮ್ಮ ಚಲವಾದಿ ನಮ್ಮ ನಾಡಿನ ಹೆಮ್ಮೆ ಮತ್ತು ನಾಡು ಕಂಡ ಅಪರೂಪದ ಗಾನಕೋಗಿಲೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ 2752ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜನಪದರು ತಮಗೆ ಅನಿಸಿದ ಭಾವನೆಗಳನ್ನು ಸರಳವಾಗಿ ಹೇಳಿದರೂ ಅದರ ಅರ್ಥದ ನಿಗೂಢತೆ ಮಿಗಿಲಾದುದು. ಗೌರಮ್ಮ ಬದುಕಿನಲ್ಲಿ ಕಷ್ಟ-ನಷ್ಟಗಳನ್ನು ಅನುಭವಿಸಿ ಹಾಡಿನಲ್ಲಿ ಮರೆತು ಹಾಡುತ್ತಿದ್ದರು. ಜನರಿಗೆ ಸಂತೋಷ ಕೊಡುತ್ತಿದ್ದರು. ಅವರ ಬದುಕೇ ಜಾನಪದಮಯವಾಗಿತ್ತು. ಹಾಡು ಎಂದರೆ ಎಲ್ಲಿಲ್ಲದ ಉತ್ಸಾಹ. ದಿನವಿಡೀ ಹಾಡಿದರೂ ದಣಿವಿಲ್ಲದೇ ಹಾಡುತ್ತಾ ವೇದನೆ ಮರೆತು, ಸಾಧನೆ ಮಾಡಿದ ಗೌರಮ್ಮ ಜಾನಪದ ಕೋಗಿಲೆ ಎಂದರು.

ಪೂಜ್ಯ ಜಗದ್ಗುರು ಸಿದ್ದಲಿಂಗ ಸ್ವಾಮೀಜಿಗಳು ಬರುವುದನ್ನು ನೋಡಿ, ಅಲ್ಲಿಯೇ ಹಾಡು ಕಟ್ಟಿ, ಹಾಡುವುದನ್ನು ಕಂಡಾಗ ಸಿದ್ದಲಿಂಗ ಸ್ವಾಮೀಜಿಗಳ ಆನಂದ ಹೇಳತೀರದು. ಶ್ರೇಷ್ಠ ಸಾಧಕಿ ಜಾನಪದ ಗಾಯಕಿ ಗೌರಮ್ಮ, ಅವರ ಬಗ್ಗೆ ಪುಣ್ಯ ಪುರುಷರ ಮಾಲಿಕೆಯಲ್ಲಿ ಜಾನಪದ ಕೋಗಿಲೆ ಗೌರಮ್ಮ ಪುಸ್ತಕವನ್ನು ಪ್ರಕಟಿಸಿದರು. ಗೌರಮ್ಮ ಓದದಿದ್ದರೂ ಜಾನಪದ ಕಲೆ ಒಲಿದಿತ್ತು. ಇಂಥ ಗಾಯಕಿಯರು ಇದ್ದುದರಿಂದಲೇ ಜಾನಪದ ಇಂದಿಗೂ ನಳನಳಿಸುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಮಹೇಶ್‌ಗೌಡ ಪೊಲೀಸ್‌ಪಾಟೀಲ್, ಸಿದ್ದಣ್ಣ ಬಂಗಾರಶೆಟ್ಟರ್, ಕೆ.ಎಸ್. ಚಟ್ಟಿ ಇವರನ್ನು ಶ್ರೀಗಳು ಆಶೀರ್ವದಿಸಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಮತ್ತು ಸೋಮನಾಥ ದೊಡ್ಡಮನಿ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಖುಷಿ ಎಂ.ಲಕ್ಕುಂಡಿ ಹಾಗೂ ವಚನ ಚಿಂತನವನ್ನು ಶ್ರದ್ಧಾ ಎಸ್.ಹೂಲಿ ನಡೆಸಿದರು. ದಾಸೋಹ ಸೇವೆಯನ್ನು ಮಲ್ಲಿಕಾರ್ಜುನ ಚಲವಾದಿ ಹಾಗೂ ಪರಿವಾರದವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಸೋಮನಾಥ ಪುರಾಣಿಕ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಇಲಕಲ್ಲದ ಅಂತಾರಾಷ್ಟ್ರೀಯ ಚಿತ್ರಕಲಾವಿದ ಡಾ. ಬಸವರಾಜ ಗವಿಮಠ ಗಾನ ಭಾವನೆಯ ಜೀವಂತ ಪ್ರತಿರೂಪ ಜಾನಪದ ಕೋಗಿಲೆ ಗೌರಮ್ಮ ಚಲವಾದಿಯವರ ಕುರಿತು ಮಾತನಾಡುತ್ತಾ, ಗೌರಮ್ಮನ ಹಾಡು ನಿಲ್ಲದ ಹಾಡು. ಒಂದೂವರೆ ಸಾವಿರ ಹಾಡುಗಳನ್ನು ಬಿಡುವಿಲ್ಲದೆ, ದಣಿವಿಲ್ಲದೆ ಹಾಡುತ್ತಿದ್ದರು. ಅವರ ಅದ್ಭುತ ನೆನಪಿನ ಶಕ್ತಿ ಮೆಚ್ಚುವಂತದ್ದು. ಇಂಥ ಗಾಯಕಿಯ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಬರಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!