ಬಳ್ಳಾರಿ: ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಮಳೆಯ ತೊಂದರೆ ಇದೀಗ ದೇವಾಲಯದವರೆಗೂ ತಲುಪಿದೆ. ಐತಿಹಾಸಿಕ ವಿರೂಪಾಕ್ಷ ದೇಗುಲದ ಆವರಣದಲ್ಲಿ ಮಳೆ ನೀರು ನಿಂತು, ಭಕ್ತರು ಹಾಗೂ ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆವರಣದಲ್ಲಿ ಮೊಣಕಾಲು ಎತ್ತರದ ಮಟ್ಟಿಗೆ ನೀರು ನಿಂತಿದ್ದು, ದರ್ಶನಕ್ಕೆ ಬಂದ ಜನರು ನೀರಿನಲ್ಲಿಯೇ ನಡೆದುಕೊಂಡು ದೇವರ ದರ್ಶನ ಪಡೆಯುವಂತಾಗಿದೆ.
ಮಳೆಯಾಗುವಾಗ ನೀರು ಹೊರಹೋಗುವ ವ್ಯವಸ್ಥೆ ಇರಬೇಕಿತ್ತು ಎಂಬ ಅಸಮಾಧಾನ ಭಕ್ತರಲ್ಲಿ ಕೇಳಿಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯ ಪ್ರದೇಶವೇ ಸಣ್ಣ ಕೆರೆಯಾಗಿ ಮಾರ್ಪಟ್ಟಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಪ್ರವಾಸಿಗರು ಹಾಗೂ ಸ್ಥಳೀಯರು ಈ ಪರಿಸ್ಥಿತಿಯನ್ನು ತಕ್ಷಣ ಸರಿಪಡಿಸಲು ದೇವಸ್ಥಾನ ಮತ್ತು ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



