ಬೆಂಗಳೂರು:- ಬಿ ಖಾತಾದಿಂದ ಎ ಖಾತಾ ಮಾಡುವ ರಾಜ್ಯ ಸರ್ಕಾರದ ಯೋಜನೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, “ಇದು ಸರ್ಕಾರದ 6ನೇ ಗ್ಯಾರಂಟಿ , ಜನತೆಗೆ ಟೋಪಿ ಹಾಕುವ ಯೋಜನೆ” ಎಂದು ವ್ಯಂಗ್ಯವಾಡಿದರು. ಐದು ಗ್ಯಾರಂಟಿಗಳ ಹೆಸರಿನಲ್ಲಿ ಈಗಾಗಲೇ ರಾಜ್ಯ ಖಜಾನೆ ಖಾಲಿ ಮಾಡಿದ್ದಾರೆ. ಈಗ A-ಖಾತಾ B-ಖಾತಾದಲ್ಲಿ ಲೂಟಿ ಮಾಡಲು ಮುಂದಾಗಿದ್ದಾರೆ. ಬೆಸ್ಕಾಂನಲ್ಲಿ 3–4 ಲಕ್ಷ ಅರ್ಜಿಗಳು ಬಂದಿವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಸರ್ಕಾರ 5% ಹೆಚ್ಚುವರಿ ಶುಲ್ಕ ಹೇರುತ್ತಿದೆ. ಇದು ಜನರಿಗೆ ಹೊರೆಯಾಗಲಿದೆ” ಎಂದು ಆರೋಪಿಸಿದರು.
“ಬಿ ಖಾತಾ ಸಮಸ್ಯೆ 1995ರಿಂದಲೂ ಇದೆ. 1997ರಲ್ಲಿ ಈ ಬಗ್ಗೆ ಆದೇಶ ಹೊರಬಂದಿತ್ತು. ನಮ್ಮ ಆಡಳಿತದಲ್ಲಿ ನಗರಾಭಿವೃದ್ಧಿಗೆ ಹಲವಾರು ಕ್ರಮ ಕೈಗೊಂಡಿದ್ದೇವೆ. 7 ನಗರಸಭೆಗಳನ್ನು 9ಕ್ಕೆ ಏರಿಸಿದ್ದೇವೆ, 68 ವಾರ್ಡ್‌ಗಳನ್ನು 98ಕ್ಕೆ ವಿಸ್ತರಿಸಿದ್ದೇವೆ, 110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದೇವೆ. ಐದು ವರ್ಷಗಳಲ್ಲಿ ಸುಮಾರು ₹25 ಸಾವಿರ ಕೋಟಿ ಅನುದಾನ ತಂದಿದ್ದೆವು.” ಎಂದು ಹೇಳಿಕೆ ನೀಡಿದ್ದಾರೆ.



