ಗದಗ: ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಭಾರಿ ಅವಾಂತರ ಉಂಟಾಗಿದೆ.
ಭಾರಿ ಗಾಳಿಯ ಪರಿಣಾಮ ನಾಲ್ಕಕ್ಕೂ ಹೆಚ್ಚು ಮನೆಗಳ ತಗಡಿನ ಶೀಟ್‌ಗಳು ಹಾರಿ ಹೋಗಿದ್ದು, ಹಲವರಿಗೆ ಗಾಯಗಳಾಗಿವೆ. ಶಿವಪ್ಪ ಲಮಾಣಿ ಅವರಿಗೆ ಕಾಲಿಗೆ ಗಾಯವಾಗಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ದೇವಲಪ್ಪ ಲಮಾಣಿ ತಲೆ ಮತ್ತು ಬೆನ್ನಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳ ಅಳಲು ಕಣ್ಣೀರಾಗಿದ್ದು, ತಕ್ಷಣದ ನೆರವಿಗಾಗಿ ಪರದಾಟ ನಡೆದಿದೆ.
ಇನ್ನೊಂದೆಡೆ, ತಹಶೀಲ್ದಾರ, ರೆವಿನ್ಯೂ ಇನ್ಸಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಂಪರ್ಕಕ್ಕೆ ಸಿಗದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈ ಮುರಿದ ಮಹಿಳೆ ಸೋಮವ್ವ ಅವರನ್ನು ಆಸ್ಪತ್ರೆಗೆ ಸಾಗಿಸಲು ಕೂಡ ತೊಂದರೆ ಎದುರಾಗಿದೆ.
ಭಾರಿ ಗಾಳಿ ಮತ್ತು ಮಳೆಯ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಾಂಡಾ ನಿವಾಸಿಗಳು ಕತ್ತಲಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಗಾಳಿಯ ತೀವ್ರತೆಗೆ ಹಲವು ಮರಗಳು ಧರೆಗೆರುಳಿದ್ದು, ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು ಹಾನಿಗೀಡಾಗಿವೆ.
ಗಾಳಿ–ಮಳೆಯ ಅಬ್ಬರ ಇನ್ನೂ ನಿಲ್ಲದಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.



