ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಬೆಸ್ಕಾಂ ಎಇ ಚೇತನ್ ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗ್ರೂಪ್ ಬಿ ಮತ್ತು ಸಿ ವರ್ಗದ ನೌಕರರ ವರ್ಗಾವಣೆಯಲ್ಲಿ ಸಿಎಂ ಕಚೇರಿಯ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಯಂತಹ ವಿಷಯಗಳಿಗಿಂತ ಮಹತ್ವದ ಆಡಳಿತಾತ್ಮಕ ಕೆಲಸಗಳಿದ್ದು, ಈ ರೀತಿಯ ವಿಷಯಗಳನ್ನು ಸಂಬಂಧಿತ ಇಲಾಖೆಗಳಿಗೇ ಬಿಟ್ಟುಕೊಡಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಟಿ.ಎಂ.ನದಾಫ್ ಒಳಗೊಂಡ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಮುಖ್ಯಮಂತ್ರಿ ಕಚೇರಿ ವರ್ಗಾವಣೆ ಮನವಿಗಳನ್ನು ಸ್ವೀಕರಿಸಬಾರದು ಹಾಗೂ ಇಂತಹ ವಿಚಾರಗಳಿಗೆ ಸಮಯ ವಿನಿಯೋಗಿಸಬಾರದು ಎಂದು ಸೂಚಿಸಿದ ನ್ಯಾಯಾಲಯ, ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ನಿರ್ದೇಶನ ನೀಡಿದೆ.
ಇದೇ ವೇಳೆ, ಸಿಎಂ ಕಚೇರಿಯಿಂದ ನೀಡುವ ವರ್ಗಾವಣೆ ಪತ್ರಗಳ ಕುರಿತು ಹೈಕೋರ್ಟ್ ಮುಖ್ಯ ಕಾರ್ಯದರ್ಶಿಯ ನಿಲುವನ್ನು ಕೇಳಿತ್ತು. ಪ್ರತಿಯಾಗಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಾಗಿದ್ದು, ಅಂತಿಮವಾಗಿ ಸಂಬಂಧಪಟ್ಟ ಇಲಾಖೆವೇ ವರ್ಗಾವಣೆ ಆದೇಶ ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.



