HomeGadag Newsಇತಿಹಾಸಕಾರರು ಗದುಗಿನ ಪ್ರಾಮುಖ್ಯತೆಯನ್ನು ಅರಿಯಲಿ: ಸಚಿವ ಎಚ್.ಕೆ. ಪಾಟೀಲ

ಇತಿಹಾಸಕಾರರು ಗದುಗಿನ ಪ್ರಾಮುಖ್ಯತೆಯನ್ನು ಅರಿಯಲಿ: ಸಚಿವ ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿರುವ ವೈವಿಧ್ಯಮಯ ಸ್ಮಾರಕಗಳು ಇನ್ನೆಲ್ಲಿಯೂ ಕಂಡುಬರುವುದಿಲ್ಲ. ಹಾಗಾಗಿ ಕರ್ನಾಟಕ ವಾಸ್ತುಶಿಲ್ಪಗಳ ತೊಟ್ಟಿಲು ಹಾಗೂ ಪ್ರಯೋಗಾಲಯವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಶನಿವಾರ ಮಹಾತ್ಮ ಗಾಂಧಿ ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ, ಮಹಾತ್ಮ ಗಾಂಧಿ ಆರ್‌ಡಿಪಿಆರ್ ವಿಶ್ವವಿದ್ಯಾಲಯ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳ ಸಹಯೋಗದಲ್ಲಿ ಜರುಗಿದ 39ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಅತಿಹೆಚ್ಚು ವಾಸ್ತುಶಿಲ್ಪಗಳಿದ್ದು, ಇಲ್ಲಿರುವ ಒದೊಂದು ಕಲ್ಲೂ ಒದೊಂದು ಇತಿಹಾಸ ಹೇಳುತ್ತವೆ. ಲಕ್ಕುಂಡಿಯಲ್ಲಿ 101 ಬಾವಿ, 101 ಗುಡಿಗಳಿದ್ದು, ಲಕ್ಕುಂಡಿ ಪ್ರಾಧಿಕಾರದ ಸಹಯೋಗದಲ್ಲಿ ಉತ್ಖನನ ಕಾರ್ಯ ಹಮ್ಮಿಕೊಂಡು ಹುದುಗಿ ಹೋದ ಶಾಸನ, ಕಲಾಕೃತಿಗಳನ್ನು ಸಂಗ್ರಹಿಸಿ ತೆರೆದ ಮೈದಾನದಲ್ಲಿ ಇಡಲಾಗಿದೆ. ಗದಗ ಜಿಲ್ಲೆಯಲ್ಲಿ ನಯಸೇನ, ಭೀಮಸೇನ ಜೋಶಿ, ಕುಮಾರವ್ಯಾಸ, ಹುಯಿಲಗೋಳ ನಾರಾಯಣರಾವ್, ಕೆ.ಎಚ್. ಪಾಟೀಲರಂತಹ ಅನೇಕ ಮಹಾತ್ಮರು ಜನಿಸಿ ಜಿಲ್ಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಹಾಗಾಗಿ ಇತಿಹಾಸಕಾರರು ಗದಗ ಜಿಲ್ಲೆಯ ಪ್ರಾಮುಖ್ಯತೆಯನ್ನು ತಿಳಿಯಬೇಕು ಎಂದರು.

ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ಮತ್ತು ಮಲಪ್ರಭಾ ನದಿಯ ದಂಡೆಗಳು ಪ್ರಾಚೀನ ಕಾಲದಲ್ಲಿಯೇ ನಾಗರಿಕತೆಯನ್ನು ಹುಟ್ಟುಹಾಕಿವೆ. ಈ ನೆಲದಲ್ಲಿ ಅನೇಕ ಪ್ರಾಗೈತಿಹಾಸಿಕ ಕುರುಹುಗಳು ಕಂಡುಬಂದಿವೆ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ರಾಜಾರಾಮ ಹೆಗಡೆ ಮಾತನಾಡಿ, ಗ್ರಾಮೀಣ ಭಾಗದ ಐತಿಹಾಸಿಕ ಸ್ಥಳಗಳಲ್ಲಿ ಹುದುಗಿಹೋದ ಪ್ರಾಚ್ಯಾವಶೇಷಗಳ ಉತ್ಖನನ ಕಾರ್ಯ ಮಾಡಿ ಸಂಶೋಧನೆ ಮಾಡುವ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಲಕ್ಕುಂಡಿಯಲ್ಲಿ ಮಾಡಿದ ಸಚಿವರು ಇತಿಹಾಸಕಾರರಿಗೆ ಸ್ಪೂರ್ತಿಯಾಗಿದ್ದಾರೆ ಮತ್ತು ಇತಿಹಾಸ ಬಗ್ಗೆ ಅವರ ಕಾಳಜಿ ನಮ್ಮೆಲ್ಲರಿಗೂ ಧೈರ್ಯ ತುಂಬಿದೆ. ಸಚಿವರ ಆಶಯದಂತೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಸರ್ವೇ ಕೈಗೊಂಡು ಮಾಹಿತಿಯನ್ನು ಕಲೆಹಾಕಲು ಇದು ಸುವರ್ಣ ಕ್ಷಣವಾಗಿದೆ ಎಂದರು.
ಸಮಾರಂಭದಲ್ಲಿ ಇತಿಹಾಸ ತಜ್ಞ ಡಾ. ಶ್ರೀನಿವಾಸ ವಿ. ಪಾಡಿಗಾರ, ಡಾ. ಕೆ. ವಸಂತಲಕ್ಷ್ಮಿ, ಡಾ. ಎಸ್. ನಾಗರಾಜಪ್ಪ, ಡಾ. ಮಲ್ಲಿಕಾರ್ಜುನ ಕುಂಬಾರ, ಡಾ. ಶರಣಬಸಪ್ಪ ಕೋಲ್ಕಾರ, ಡಾ. ರಮೇಶ್ ನಾಯಕ, ಡಾ. ಪದ್ಮಜಾ ದೇಸಾಯಿ, ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಡಾ. ಎಂ. ಕೊಟ್ರೇಶ್, ಮಹಾದೇವ ಜಗತಾಪ, ಡಾ. ಎ.ಓ. ನರಸಿಂಹಮೂರ್ತಿ, ಒವನ್ ಮೌರ್ಯ ಚಕ್ರವರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ಡಾ. ಅಬ್ದುಲ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಡಾ. ಲಕ್ಷ್ಮಣ್ ತೆಲಗಾವಿ, ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ನಾಡಗೌಡರ, ಶರಣು ಗೋಗೇರಿ, ಡಾ. ದೇವರಕೊಂಡಾರೆಡ್ಡಿ ಹಾಜರಿದ್ದರು. ದತ್ತ ಪ್ರಸನ್ನ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ಕರ್ನಾಟಕದಲ್ಲಿರುವ ಪ್ರಾಚ್ಯಾವಶೇಷಗಳ ಕುರಿತು ಸಂಪೂರ್ಣ ಸಮೀಕ್ಷೆ ಮಾಡುವ ಕೆಲಸ ಆರಂಭಿಸಲಾಗಿದೆ. ಸ್ಮಾರಕ ದತ್ತು ಯೋಜನೆಯಡಿಯಲ್ಲಿ ಇತಿಹಾಸಕಾರರು ಆಸಕ್ತಿ ವಹಿಸಿ ರಾಜ್ಯದ 119 ತಾಲೂಕುಗಳಲ್ಲಿ ಸರ್ವೇ ಮಾಡಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಬೇಕು. ನಂತರ ಡಿಜಿಟಲೀಕರಣಗೊಳಿಸಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!