HomeDharwadಸೈಬರ್ ಅಪರಾಧ ತಡೆಗೆ ಅಗತ್ಯ ತರಬೇತಿ

ಸೈಬರ್ ಅಪರಾಧ ತಡೆಗೆ ಅಗತ್ಯ ತರಬೇತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಈಗಾಗಲೇ ಅಸ್ತಿತ್ವದಲ್ಲಿರುವ ಸೆನ್ ಠಾಣೆ (ಅಇಓ) ಠಾಣೆಗಳಿಗೆ ಎಸ್.ಪಿ. ರ‍್ಯಾಂಕ್‌ನ ಅಧಿಕಾರಿಗಳನ್ನು ನೇಮಿಸಲಾಗುವುದೆಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ರಾಷ್ಟ್ರೀಯ ವಿಧಿ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗಗಳಿಗೆ ಹಾಗೂ ಪ್ರಯೋಗಾಲಯಗಳಿಗೆ ಶನಿವಾರ ಭೇಟಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಎಲ್ಲೆಡೆ ಯಾವುದೇ ಅಡೆತಡೆಗಳಿಲ್ಲದೇ ರಾಜ್ಯ, ದೇಶ, ವಿದೇಶದಾದ್ಯಂತ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಧುನಿಕ ಅಪರಾಧ ತನಿಖೆಗಳಿಗೆ ತಕ್ಕಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು.

ಯಾವುದೇ ಸೈಬರ್ ಅಪರಾಧವಾದರೆ ಹೊಸ ಕಾನೂನುಗಳನ್ವಯ ತನಿಖೆ ನಡೆಸಬೇಕಾಗುತ್ತದೆ ಎಂದರು.
ಜಿಲ್ಲೆಗೊಂದರಂತೆ ರಾಜ್ಯದಲ್ಲಿ ಒಟ್ಟು 43 ಸೆನ್ ಪೊಲೀಸ್ ಠಾಣೆಗಳಿದ್ದು, ಸದ್ಯ ಡಿವೈಎಸ್ಪಿ ಅಧಿಕಾರಿಗಳು ಇರುತ್ತಾರೆ. ಮುಂದಿನ ದಿನಗಳಲ್ಲಿ ಎಸ್.ಪಿ ರ‍್ಯಾಂಕ್ ಅಧಿಕಾರಿಗಳನ್ನು ನೇಮಿಸಲಾಗುವುದು. ಸೆನ್ ಠಾಣೆಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ವಿಶೇಷ ತರಬೇತಿ ರೂಪಿಸಲಾಗುವುದು. ಈ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಸಂಸ್ಥೆಯು ರಾಜ್ಯದ ಪೊಲೀಸ್ ಇಲಾಖೆಗೆ ಹೆಚ್ಚು ಉಪಯೋಗವಾಗಲಿದೆ ಎಂದರು.

ದಿನೇ ದಿನೇ ಅಪರಾಧಗಳ ರೂಪರೇಷೆ ಬದಲಾಗುತ್ತಿದೆ. ತನಿಖೆಯ ಮಾರ್ಗಗಳು ಸಹ ಬದಲಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಗುಪ್ತಚರ ವಿಭಾಗದಲ್ಲಿ ಪ್ರತ್ಯೇಕ ತರಬೇತಿ ನೀಡಿದಂತೆ ಸೆನ್ ಠಾಣೆ ಸಿಬ್ಬಂದಿಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದೆಂದು ಸಚಿವರು ತಿಳಿಸಿದರು.

ಸೈಬರ್ ಕ್ರೈಂಗಳು ಯಾವುದೇ ಅಡೆತಡೆ ಇಲ್ಲದೇ ವಿಶ್ವವ್ಯಾಪಿಯಾಗಿವೆ. ಗುಜರಾತ್‌ನಲ್ಲಿ ಸೈಬರ್ ವಿಶ್ವ ವಿದ್ಯಾಲಯ ನಿರ್ಮಿಸಲಾಗಿದ್ದು, ವಿವಿಧ ದೇಶಗಳಿಂದ ಆಸಕ್ತರು ಬಂದು ತರಬೇತಿ ಪಡೆಯುತ್ತಿದ್ದಾರೆ. ಇದರ ಭಾಗವಾಗಿ ಧಾರವಾಡದಲ್ಲಿ ವಿಧಿ ವಿಜ್ಞಾನ ಸಂಸ್ಥೆ ಸ್ಥಾಪಿಸಲಾಗಿದ್ದು, ರಾಜ್ಯದ ಪೊಲೀಸ್ ಇಲಾಖೆಗೆ ಆಧುನಿಕ ವಿಧಿ ವಿಜ್ಞಾನವು ಅತೀ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ ಎಂದರು.

ಬೆಂಗಳೂರಿನಲ್ಲಿ 10 ಸಾವಿರ ವಿದೇಶಿಗರು ವಾಸಿಸುತ್ತಿದ್ದು, ಆಫ್ರಿಕಾ ಪ್ರಜೆಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಕಳೆದೊಂದು ವರ್ಷದಲ್ಲಿ ಡ್ರಗ್ಸ್ ಧಂದೆಯಲ್ಲಿ ತೊಡಗಿದ ನೂರಾರು ವಿದ್ಯಾರ್ಥಿಗಳನ್ನು ಅವರವರ ದೇಶಕ್ಕೆ ವಾಪಸ್ ಕಳಿಸಲಾಗಿದೆ ಎಂದು ತಿಳಿಸಿದರು.

ನಂತರ ವಿಧಿ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ವಿದ್ಯಾರ್ಥಿಗಳಿಗೆ ಬರುವ ದಿನಮಾನಗಳಲ್ಲಿ ವಿಫುಲ ಅವಕಾಶಗಳಿವೆ. ಸೈಬರ್ ಫಾರೆನ್ಸಿಕ್‌ಗಳು, ಸೈಬರ್ ಕಮಾಂಡೋಗಳು, ಸೈಬರ್ ಎಕ್ಸ್ಪರ್ಟ್ಗಳ ತಯಾರಿ ಮಾಡುವಲ್ಲಿ ವಿಧಿ ವಿಜ್ಞಾನ ಸಂಸ್ಥೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ತಂತ್ರಜ್ಞಾನಕ್ಕನುಗುಣವಾಗಿ ಅಪರಾಧ ಹಾಗೂ ಅಪರಾಧಿಗಳ ಚಟುವಟಿಕೆಗಳನ್ನು ಮೊದಲೇ ವಿಶ್ಲೇಷಿಸಲು ಸರಿಯಾದ ಉಪಕರಣಗಳ ಜೊತೆಗೆ ಪರಿಣಿತರು ಸಹ ಇರಲೇಬೇಕು. ಭಾರತೀಯ 3 ಹೊಸ ಕಾನೂನುಗಳ ಬೇಡಿಕೆಗೆ ಅನುಗುಣವಾಗಿ ಪ್ರಕರಣಗಳನ್ನು ತನಿಖೆ ಮಾಡುವಲ್ಲಿ ಅನುಕೂಲವಾಗುತ್ತದೆ. ಸೈಬರ್ ಪರಿಣಿತರು ನೀಡುವ ವರದಿ ಹಾಗೂ ದಾಖಲೆಗಳು ಹೊಸ ಕಾನೂನಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಘಾಟೆ, ಡಿಜಿಟಲ್ ವಿಧಿ ವಿಜ್ಞಾನ, ಜೌಷಧಿ ವಿಧಿ ವಿಜ್ಞಾನ, ಬಯೋಕೆಮಿಸ್ಟಿç ವಿಧಿ ವಿಜ್ಞಾನ, ಸೈಬರ್ ಸೆಕ್ಯೂರಿಟಿ ಹಾಗೂ ಪರಿಸರ ವಿಧಿ ವಿಜ್ಞಾನಗಳನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಯೋಗಾಲಯ ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಚಿವರು ವೀಕ್ಷಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಬೆಳಗಾವಿ ವಿಭಾಗದ ಐಜಿಪಿ ವಿಕಾಸಕುಮಾರ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉಪಸ್ಥಿತರಿದ್ದರು.

ರಾಜ್ಯ ಸರಕಾರವು ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ಸ್ವತಃ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಈ ಬಗ್ಗೆ ವಿಶೇಷ ಕಾರ್ಯಪಡೆ ರಚಿಸಿದ್ದಾರೆ. ಕಳೆದೊಂದು ವರ್ಷದಲ್ಲಿ 150 ಕೋಟಿ ರೂ ಮೌಲ್ಯದ ಡ್ರಗ್ಸ್ ಬರುತ್ತಿದ್ದು, ಸಾಕಷ್ಟು ಎಚ್ಚರದ ಕ್ರಮಗಳನ್ನು ವಹಿಸಲಾಗುತ್ತಿದೆ. ಈಗಾಗಲೇ ಹೈಡ್ರೊ ಗಾಂಜಾವನ್ನು ನಾಲ್ಕು ಗೋಡೆಗಳ ನಡುವೆ ಬೆಳೆಯಲಾಗುತ್ತಿದ್ದು, ಇದನ್ನು ಕಂಡು ಹಿಡಿಯುವುದು ಸವಾಲಾಗಿದೆಯೆಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!