ಹಾಸನ:- ಜಿಲ್ಲೆ ಬೇಲೂರು ತಾಲ್ಲೂಕಿನ ಬಂಟೇನಹಳ್ಳಿ ಗ್ರಾಮದ ಬಳಿ ಮೂರು ಬೈಕ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಯುವಕರಿಗೆ ಕೈ-ಕಾಲು ಮುರಿತವಾಗಿರುವ ಘಟನೆ ನಡೆದಿದೆ.
ಘಟನೆಯಲ್ಲಿ ದಂಪತಿ ಸೇರಿದಂತೆ ಇನ್ನಿಬ್ಬರು ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲಸ ಮುಗಿಸಿಕೊಂಡು ಹಾಸನದತ್ತ ತೆರಳುತ್ತಿದ್ದ ತೀರ್ಥಕುಮಾರ್–ಕಾಂಚನ ದಂಪತಿ, ಎರಡು ಬೈಕ್‌ಗಳಲ್ಲಿ ಐವರು ಯುವಕರು ಓವರ್‌ಟೇಕ್ ಮಾಡುವ ವೇಳೆ ಪರಸ್ಪರ ಡಿಕ್ಕಿಯಾದುದನ್ನು ನೋಡಿ ಗಾಬರಿಗೊಂಡು ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ.
ಅಪಘಾತದಲ್ಲಿ ಸಮೀನ ಅಕ್ತರ್ (18), ಸರ್ವರ್ (21) ಸೇರಿದಂತೆ ಮತ್ತೋರ್ವರಿಗೆ ಗಾಯಗಳಾಗಿದ್ದು, ಅವರು ಕೊಲ್ಕತ್ತಾ ಮೂಲದವರಾಗಿದ್ದಾರೆ. ಕಾಫಿ ಕ್ಯೂರಿಂಗ್ ಕೆಲಸ ಮುಗಿಸಿಕೊಂಡು ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ಇನ್ನೊಂದು ಬೈಕ್‌ನಲ್ಲಿದ್ದ ಕೈಫ್ ಮತ್ತು ಸಮೀನ್‌ಗೆ ಸಣ್ಣಪುಟ್ಟ ಗಾಯಗಳಾಗಿ ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ.
ಗಾಯಾಳುಗಳನ್ನು ಹಾಸನ ಆಸ್ಪತ್ರೆಗೆ ಕರೆದೊಯ್ಯಲು ಬಂದ ಎರಡು ಅಂಬ್ಯುಲೆನ್ಸ್‌ಗಳು ಕೂಡ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ. ಅಂಬ್ಯುಲೆನ್ಸ್ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೇ ಅಂಬ್ಯುಲೆನ್ಸ್‌ಗಳಲ್ಲಿ ಮೂವರು ಗಾಯಾಳುಗಳನ್ನು ಹಾಸನಕ್ಕೆ ರವಾನಿಸಲಾಗಿದೆ. ತೀರ್ಥಕುಮಾರ್–ಕಾಂಚನ ದಂಪತಿ ರಸ್ತೆಗೆ ಬಿದ್ದ ನಂತರ ಬೈಕ್ ಚಲಾಯಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



