ನವದೆಹಲಿ: ನಾನೇ ಪ್ರಾದೇಶಿಕ ಪಕ್ಷ ಸ್ಥಾಪಿಸಿ 2028ರ ವೇಳೆಗೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವ ಬಿಜೆಪಿ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಲು ದೆಹಲಿಗೆ ಬಂದಿಲ್ಲ. ಯಾರ ಕಾಲಿಗೆ ಬಿದ್ದು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನೇ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುತ್ತೇನೆ. 2028ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಯಾವ ಸರ್ವೇ ಮಾಡಿದರೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಜೆಸಿಬಿ ಆಗುತ್ತದೆಯೋ ಅಥವಾ ಬೇರೆ ಏನಾಗುತ್ತದೆಯೋ ನೋಡೋಣ, ಆದರೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ನಾನು ಪಕ್ಷಕ್ಕೆ ಸೇರುವುದಿಲ್ಲ. ವಿಜಯೇಂದ್ರ, ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರ ಕುಟುಂಬ ಇರುವವರೆಗೂ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ನಾನು ಯಾರ ಬಳಿಗೂ ಹೋಗಿ ಕೈಕಾಲು ಹಿಡಿದು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕೇಳುವ ಅವಶ್ಯಕತೆ ಇಲ್ಲ. ನಾವು ಸ್ವಾಭಿಮಾನದಿಂದ ಬದುಕುವವರು. ಭ್ರಷ್ಟ ಕುಟುಂಬದ ನೇತೃತ್ವವನ್ನು ನಾವು ಒಪ್ಪುವುದಿಲ್ಲ ಎಂದು ತೀವ್ರವಾಗಿ ಟೀಕಿಸಿದರು.



