ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ತಿಮ್ಮಾಪೂರ ಗ್ರಾಮದ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಹಾಗೂ ಸಾರ್ವಜನಿಕ ಗ್ರಂಥಾಲಯವನ್ನು ರೋಣ ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 61 ಲಕ್ಷ ರೂ ಮೌಲ್ಯದ ಸದರಿ ಕಾಮಗಾರಿಯನ್ನು ಗುಣಮಟ್ಟದಿಂದ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಥಮ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದ ಮಹಿಳೆಯರು, ಗರ್ಭಿಣಿ ಸ್ತ್ರೀಯರು, ಬಡವರಿಗೆ ಆಧಾರವಾಗಿದೆ. ಇಲ್ಲಿ ಉತ್ತಮ ಚಿಕಿತ್ಸೆ ನೀಡುವುದರಿಂದ ಪಟ್ಟಣ ಪ್ರದೇಶಕ್ಕೆ ಹೋಗುವ ಅನಿವಾರ್ಯತೆ ಎದುರಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಹನುಮವ್ವ ತಳವಾರ, ಉಪಾಧ್ಯಕ್ಷ ಹುಚ್ಚೀರಪ್ಪ ಜೋಗಿನ, ಬಸವರಾಜ ಯಲಬುರ್ಗಿ, ತಾ.ಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಪಾಟೀಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುತ್ತು ಕೊಣ್ಣೂರ, ಗದಗ ತಹಸೀಲ್ದಾರ ಶ್ರೀನಿವಾಸ್ ಕುಲಕರ್ಣಿ, ಪಂ.ರಾ ಇಂಜಿನಿಯರ್ ಚಾಟಿ, ಲೋಕೋಪಯೋಗಿ ಇಂಜಿನಿಯರ್ ಎಂ.ಎಸ್. ಪಾಟೀಲ್, ಆರೋಗ್ಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಎಸ್.ಎನ್. ಲಿಂಗದಾಳ, ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ಯಲ್ಲಪ್ಪ ಕಡಮನಿ, ಮುತ್ತಣ್ಣ ಹಟ್ಟಿಮನಿ, ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ, ಪಿಡಿಒ ಶಿವಲೀಲಾ ಗೂಳಪ್ಪನವರ, ಹಿರಿಯರಾದ ಯಲ್ಲಪ್ಪ ಹಾಗಲದ, ಭೀಮಪ್ಪ ರಾಮಜಿ, ಸುರೇಶ್ ಬಿಸನಳ್ಳಿ, ಮಲ್ಲಿಕಾರ್ಜುನ ಇದ್ಲಿ, ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ರಾಮಪ್ಪ ಹಚ್ಚಪ್ಪನವರ, ಹನುಮಪ್ಪ ಭೀಮನೂರು, ಕುಬೇರಗೌಡ ಪಾಟೀಲ್, ಗಿರೀಶ ಗುಡ್ಲಾನೂರ, ಗುತ್ತಿಗೆದಾರ ಪ್ರಭು ಹೊಸಮನಿ ಮುಂತಾದವರಿದ್ದರು.
ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯುವಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ವಿದ್ಯಾರ್ಜನೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಡಿಜಿಟಲ್ ಲೈಬ್ರರಿಯನ್ನು ತೆರೆದಿದ್ದು, ಎಲ್ಲಾ ಆನ್ಲೈನ್ ಸೇವೆಗಳನ್ನು ಈ ಲೈಬ್ರರಿಯಲ್ಲಿ ವಿದ್ಯಾರ್ಥಿಗಳು ಪಡೆಯಬಹುದು. ಸಾರ್ವಜನಿಕರು, ವಿದ್ಯಾರ್ಥಿಗಳು ಇದರ ಲಾಭ ಪಡೆದು ಜ್ಞಾನವನ್ನು ಹೆಚ್ಚಿಸಿಕೊಂಡು ಸರಕಾರಿ ನೌಕರಿಯನ್ನು ಗಿಟ್ಟಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.



