ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಂಘ ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಬೆಂಬಲಿಸಿ ಮುಳಗುಂದ ಪಟ್ಟಣದ ಪ.ಪಂ ಮುಂಭಾಗದ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೌರಕಾರ್ಮಿಕರು ಅನಿರ್ದಿಷ್ಟ ಮುಷ್ಕರ ನಡೆಸಿದರು.
ಪಟ್ಟಣದ ಪಂಚಾಯಿತಿಯ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಪಟ್ಟಣದ ಸ್ವಚ್ಛತೆ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಪೌರಕಾರ್ಮಿಕ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ನೀಲಪ್ಪ ದೊಡ್ಡಮನಿ ಹೇಳಿದರು.
ಪ.ಪಂ ಆರ್‌ಐ ಇಮಾಮಸಾಬ ಕಾಲನಾಯ್ಕ, ಸದಸ್ಯ ಬಸವರಾಜ ಹಾರೋಗೇರಿ ಪೌರಕಾರ್ಮಿಕರ ಮನವಿ ಸ್ವೀಕರಿಸಿ ಮಾತನಾಡಿ, ಪೌರಕಾರ್ಮಿಕರು ಮುಳಗುಂದ ಪಟ್ಟಣದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಮಿಕರ ಬೇಡಿಕೆ ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಶುರಾಮ ದೊಡ್ಡಮನಿ, ಸುಭಾಷ ದೊಡ್ಡಮನಿ, ರಮೇಶ ಮ್ಯಾಗೇರಿ, ಮಾಹಾಂತೇಶ ಮ್ಯಾಗೇರಿ, ಹನುಮಂತ ಮ್ಯಾಗೇರಿ, ಪರಶುರಾಮ ಸಣ್ಣತಮ್ಮನವರ, ಅನಿಲ ಕರಿಯಮ್ಮನವರ ಮುಂತಾದವರಿದ್ದರು.



