ವಾಷಿಂಗ್ಟನ್: ಭಾರತೀಯ ಮೂಲದ ಇಬ್ಬರು ಸಹೋದರರು ಅಮೆರಿಕದಲ್ಲಿ ಬಹುಕೋಟಿ ವಂಚನೆ ನಡೆಸಿರುವುದು ಸಾಬೀತಾಗಿದ್ದು, ಅವರಿಗೆ ಗರಿಷ್ಠ 400 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಪೆನ್ಸಿಲ್ವೇನಿಯಾದ ನಿವಾಸಿಗಳಾದ ಭಾಸ್ಕರ್ ಸವಾನಿ (60) ಮತ್ತು ಅರುಣ್ ಸವಾನಿ (58) ವೀಸಾ ವಂಚನೆ, ಆರೋಗ್ಯ ವಿಮೆ ವಂಚನೆ, ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಪರಾಧಿಗಳೆಂದು ತೀರ್ಪು ಬಂದಿದೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ನ್ಯಾಯಾಲಯ ಘೋಷಿಸಬೇಕಿದೆ ಎಂದು ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.
ಅಪರಾಧಿಗಳಾದ ಇಬ್ಬರು “ಸವಾನಿ ಗ್ರೂಪ್” ಎಂಬ ವೆಬ್‌ಸೈಟ್ ಮೂಲಕ ಕಾನೂನುಬಾಹಿರವಾಗಿ ಹಣ ಸಂಪಾದಿಸಿದ್ದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ದಂತ ವೈದ್ಯರಾಗಿದ್ದ ಭಾಸ್ಕರ್ ಸವಾನಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಂಚನೆಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿಗರನ್ನು ನೇಮಕ ಮಾಡಿಕೊಳ್ಳಲು ವೀಸಾ ಅರ್ಜಿಗಳಲ್ಲಿ ವಂಚನೆ ಮಾಡುವುದು, ಅಕ್ರಮ ಹಣ ವರ್ಗಾವಣೆ ನಡೆಸುವುದು, ವೈದ್ಯಕೀಯ ಕ್ಷೇತ್ರದ ವಂಚನೆ ಹಾಗೂ ತೆರಿಗೆ ತಪ್ಪಿಸಲು ಹಲವು ಖರ್ಚುಗಳನ್ನು ಮುಚ್ಚಿಹಾಕಿದ ಆರೋಪಗಳು ಇವರ ಮೇಲೆ ಸಾಬೀತಾಗಿವೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅಲೆಕ್ಸಾಂಡ್ರಾ ರಾಡೋಮಿಯಾಕ್ ಎಂಬವರಿಗೂ ಅಪರಾಧ ಸಾಬೀತಾಗಿದ್ದು, ಅವರಿಗೆ ಸುಮಾರು 40 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ.



