ಇಸ್ಲಾಮಾಬಾದ್:- ಭಾರತೀಯ ವಿಮಾನಗಳು ನಮ್ಮ ದೇಶಕ್ಕೆ ಬಂದ್ರೆ ಸಮುದ್ರಕ್ಕೆ ಎಸೆಯುತ್ತೇವೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅವರು ಬುರುಡೆ ಬಿಟ್ಟಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಈ ದಾಳಿ ಅಚ್ಚರಿ ಮೂಡಿಸಿತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯ ವಿಮಾನಗಳು ತಮ್ಮ ದೇಶವನ್ನು ಪ್ರವೇಶಿಸಿದರೆ ಸಮುದ್ರಕ್ಕೆ ಎಸೆಯಲು ಪಾಕಿಸ್ತಾನ ವಾಯುಪಡೆ ಸಿದ್ಧವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿದೆ. ಪಾಕಿಸ್ತಾನವು 5 ರಫೇಲ್ ಜೆಟ್‌ಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹಸಿಹಸಿ ಸುಳ್ಳು ಹೇಳಿದ್ದಾರೆ.
ಪಾಕಿಸ್ತಾನ ವಾಯುಪಡೆಯು ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ರಾತ್ರಿಯನ್ನು ಐತಿಹಾಸಿಕ ರಾತ್ರಿಯನ್ನಾಗಿ ಮಾಡಿತು. ದಾಳಿಯಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಅನೇಕ ಪಾಕಿಸ್ತಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಾಕ್ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವನ್ನು ಭಾರತ ದೂಷಿಸಿದೆ. ಆದರೆ, ಬಲೂಚಿಸ್ತಾನದಲ್ಲಿ ನಡೆದ ರೈಲು ಅಪಹರಣವಾಯಿತು. ಈ ದಾಳಿಗೆ ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ.
ಪಹಲ್ಗಾಮ್ ದಾಳಿಯು ನಾನು ಟರ್ಕಿಯಲ್ಲಿದ್ದಾಗ ನಡೆದಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿಲ್ಲ. ಈ ವಿಷಯದ ಬಗ್ಗೆ ತನಿಖೆಗೆ ಆಹ್ವಾನ ನೀಡಿದ್ದೇನೆ. ತನಿಖೆಗೆ ಸಹಕರಿಸಲು ಪಾಕಿಸ್ತಾನ ಸಿದ್ಧವಾಗಿದೆ. ಆದಾಗ್ಯೂ, ಭಾರತ ಈ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ವಾಯುಪಡೆಯು ಯಾವುದೇ ದಿನ ದಾಳಿ ನಡೆಸುತ್ತದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಪಾಕಿಸ್ತಾನ ವಾಯುಪಡೆಯು ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧವಾಗಿದೆ ಎಂದಿದ್ದಾರೆ.



