ನವದೆಹಲಿ: ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಇದು ಊಹಿಸಲಸಾಧ್ಯವಾದ ಮಹತ್ವದ ಸಾಧನೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
WION ವರ್ಲ್ಡ್ ಪಲ್ಸ್ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 2030ರೊಳಗೆ 500 ಗಿಗಾವಾಟ್ (GW) ನವೀಕರಿಸಬಹುದಾದ ಇಂಧನ ಗುರಿ ಸಾಧಿಸಲು ಭಾರತ ವೇಗವಾಗಿ ಸಾಗುತ್ತಿದೆ ಎಂದರು. ಶುದ್ಧ ಇಂಧನ ಕ್ಷೇತ್ರದಲ್ಲಿ ದೇಶವು ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.
ಭಾರತದ ಮಾಡ್ಯೂಲ್ ಹಾಗೂ ಉತ್ಪಾದನಾ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಿದೆ. ದೇಶದ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 35 ಗಿಗಾವಾಟ್‌ಗೆ ತಲುಪಿದ್ದು, 55 ಲಕ್ಷ ಸ್ಥಾಪನೆಗಳ ಮೂಲಕ ನಿರ್ವಹಿಸಲಾಗುತ್ತಿದೆ. ಇದರಲ್ಲಿ 31 ಲಕ್ಷ ಮನೆಗಳು ಒಳಗೊಂಡಿವೆ ಎಂದು ವಿವರಿಸಿದರು.
ಇದೇ ವೇಳೆ, PM ಸೂರ್ಯಘರ್ ಮತ್ತು PM ಕುಸುಮ್ ಯೋಜನೆಗಳ ಅಡಿಯಲ್ಲಿ 23 ಲಕ್ಷ ಸೌರಶಕ್ತಿ ಆಧಾರಿತ ನೀರಾವರಿ ಪಂಪುಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ದಶಕದ ಹಿಂದೆ ಊಹಿಸಲಾಗದ ಮೈಲುಗಲ್ಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹತ್ತರ ಪರಿವರ್ತನೆ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.



