ಯಾದಗಿರಿ: ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ.
ಮಹಿಳೆಯೊಬ್ಬರ ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ಅಮಾನುಷವಾಗಿ ವರ್ತಿಸಿದ ಘಟನೆ ಸಂಬಂಧ 11 ಜನರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಕಸ್ತೂರಿಬಾಯಿ ಡಾಕಪ್ಪ ಮತ್ತು ಡಾಕಪ್ಪ ಚಿನ್ನಾರಾಠೋಡ ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ವಿಜಯಕುಮಾರ ಕಿಶನ್ ರಾಠೋಡ ಮತ್ತು ಇತರೆ ಹತ್ತು ಮಂದಿ ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದು, ಮುಂಬೈ, ಪುಣೆಯಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ಇದ್ದು, ಪೋಲೀಸರು ಶೋಧ ಕೈಗೊಂಡಿದ್ದಾರೆ.
ಸಂತ್ರಸ್ತೆ ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿ ಇರುವ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಆಕೆಯ ಅಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ಆದ್ರೆ ಆರೋಪಿಗಳು ಅಳಿಯನ ಜೊತೆಗೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ ಅಂತ ನಿಂದಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಸುಮಾರು 11 ಜನ ಗಂಗೂಭಾಯಿಯನ್ನ ಒದ್ದು ನೆಲಕ್ಕೆ ಕೆಡವಿದ್ದಾರೆ. ಆಕೆಯನ್ನ ಹಿಡಿದು ತಲೆಕೂದಲು ಕತ್ತರಿಸಿದ್ದಾರೆ. ನಂತರ ತಲೆಗೆ ಸುಣ್ಣ ಹಚ್ಚಿ, ಮೈಮೇಲೆ ಕಾರದಪುಡಿ ಹಾಕಿ ದುಷ್ಕೃತ್ಯ ಎಸಗಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಘಟನೆ ಸಂಬಂಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



