ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರಣರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 111 ರನ್ ಬಾರಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 95 ರನ್ಗಳಿಸಿ ಆಲೌಟ್ ಆಗಿದೆ. ಇನ್ನೂ ಈ ಸೋಲಿನ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ.
ಸೋಲಿನ ಬಗ್ಗೆ ಕೇಳಿದಾಗ, ವಿವರಿಸಲು ಏನೂ ಇಲ್ಲ, ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ತಂಡದ ಪ್ರದರ್ಶನದಿಂದ ನಿಜಕ್ಕೂ ತುಂಬಾ ನಿರಾಶೆಯಾಗಿದೆ. ನಾನು ಕೆಟ್ಟ ಆಡವಾಡಿದ್ದೇನೆ. ಹೀಗಾಗಿ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದರು.
ಏಕೆಂದರೆ ನಾನು ವಿಕೆಟ್ ಕಳೆದುಕೊಂಡ ಬಳಿಕ ಕೆಕೆಆರ್ ತಂಡದ ಪತನ ಶುರುವಾಗಿತ್ತು. ಎಲ್ಬಿಡಬ್ಲ್ಯೂ ಆಗಿದ್ದರೂ, ನಾನು ರಿವ್ಯೂ ತೆಗೆದುಕೊಂಡಿರಲಿಲ್ಲ. ಆ ಸಮಯದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ನಾನು ಬಯಸಲಿಲ್ಲ. ಅಲ್ಲದೆ ನನಗೂ ಖಚಿತತೆವಿರಲಿಲ್ಲ, ಆದ್ದರಿಂದ ವಿಮರ್ಶೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದೆ ಎಂದು ತಿಳಿಸಿದರು.
ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಯುಜ್ವೇಂದ್ರ ಚಾಹಲ್ ಎಲ್ಬಿಡಬ್ಲ್ಯೂ ಮಾಡಿದ್ದರು. ಆದರೆ ಫೀಲ್ಡ್ ಅಂಪೈರ್ ತೀರ್ಪಿನ ವಿರುದ್ಧ ರಿವ್ಯೂ ತೆಗೆದುಕೊಳ್ಳದೇ ರಹಾನೆ ಹೊರ ನಡೆದಿದ್ದರು. ಆ ಬಳಿಕ ತೋರಿಸಿದ ರೀಪ್ಲೆನಲ್ಲಿ ಚೆಂಡು ಆಫ್ ಸ್ಟಂಪ್‌ನ ಹೊರಗೆ ಹೋಗುತ್ತಿರುವುದು ಕಂಡುಬಂದಿತು.
ಚೆಂಡು ವಿಕೆಟ್ ಹೊರಗೆ ಹೋಗುತ್ತದೆಯೇ ಎಂಬುದು ತನಗೆ ಯಾವುದೇ ಖಚಿತತೆ ಇರಲಿಲ್ಲ. ಹೀಗಾಗಿ ರಿವ್ಯೂ ತೆಗೆದುಕೊಳ್ಳದೇ ಹೊರ ನಡೆದೆ. ನಾನು ಔಟಾದ ಬಳಿಕ ಕೆಕೆಆರ್ ಸತತವಾಗಿ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊರುವುದಾಗಿ ರಹಾನೆ ತಿಳಿಸಿದ್ದಾರೆ.



