ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಾ ಕೇಂದ್ರದಿAದ ಕೆಲವೇ ಕಿಮೀಗಳ ಅಂತರದಲ್ಲಿರುವ ಕಡಕೋಳ ಗ್ರಾಮವು ಗ್ರಾಮ ಪಂಚಾಯತಿಯ ಕೇಂದ್ರಸ್ಥಾನವಾಗಿದ್ದು, ಇಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಜೆಜೆಎಂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ, ಸಾರ್ವಜನಿಕರಿಗೆ ನೀರು ಸಿಗುತ್ತಿಲ್ಲ.
ಕಡಕೋಳ ಗ್ರಾಮದಲ್ಲಿ ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ಜೆಜೆಎಂ ಕಾಮಗಾರಿಯ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡುವ ಕೆಲಸವು 3 ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಗ್ರಾ.ಪಂ ವತಿಯಿಂದ ನಿರ್ಮಿಸಿದ ಸಿಸಿ ರಸ್ತೆಗಳನ್ನು ತೆಗೆದು ಪೈಪ್ಗಳನ್ನು ಜೋಡಿಸಲಾಗಿದೆ. ಮತ್ತೆ ಈ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ಹಾಕಿಲ್ಲ, ಪೈಪುಗಳನ್ನು ಸರಿಯಾಗಿ ಮುಚ್ಚಿಲ್ಲ. ಕೆಲವು ಕಡೆಗಳಲ್ಲಿ ನಲ್ಲಿಗಳನ್ನೇ ಅಳವಡಿಸಿಲ್ಲ. ಕಾಮಗಾರಿಯ ಮೂಲಕ ಗ್ರಾಮದಲ್ಲಿ 700ಕ್ಕೂ ಅಧಿಕ ಮನೆಗಳಿಗೆ ನೀರು ಸರಬರಾಜು ಕಲ್ಪಿಸಬೇಕಿತ್ತು. ಆದರೆ 600 ಮನೆಗಳಿಗೆ ಮಾತ್ರ ಸಂಪರ್ಕ ಜೋಡಿಸಲಾಗಿದೆ. ಉಳಿದ ನಿವಾಸಿಗಳು ನಿತ್ಯವೂ ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ನಮಗೆ ನೀರು ಯಾವಾಗ ಕಲ್ಪಿಸುತ್ತೀರಿ ಎನ್ನುವಂತಾಗಿದೆ.
ಹಲವು ಕಡೆಗಳಲ್ಲಿ ಈಗಾಗಲೇ ಪೈಪುಗಳು ಒಡೆದು ಹೋಗಿದ್ದು, ಎಲ್ಲೆಂದರಲ್ಲಿ ನೀರು ಪೋಲಾಗುತ್ತಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಪೈಪುಗಳ ಜೋಡಣೆಗೆ ತೆಗೆದಿದ್ದ ರಸ್ತೆಗೆ ತಾತ್ಕಾಲಿಕವಾಗಿ ಮಣ್ಣು ಮುಚ್ಚಿ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಗ್ರಾ.ಪಂ ವತಿಯಿಂದ ಪ್ರತ್ಯೇಕ ಪೈಪ್ ಅಳವಡಿಸಿ ಜನತೆಗೆ ನೀರು ಪೂರೈಸುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಅಸಮರ್ಪಕ ಉತ್ತರದಿಂದ ಇಲ್ಲಿಯ ಆಡಳಿತ ಮಂಡಳಿ ಬೇಸತ್ತು ಹೋಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ ಮಿಷನ್ ಯೋಜನೆಯಡಿ ಕೇಂದ್ರ-ರಾಜ್ಯ ಸರಕಾರಗಳು ಕೋಟಿಗಟ್ಟಲೇ ಅನುದಾನವನ್ನು ಒದಗಿಸುತ್ತಿವೆ. ಆದರೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದೇ, ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಕೆಲಸ ಮಾಡುತ್ತಿದ್ದರೂ ಸಹ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೆಲಸ ನಡೆಯುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾಧ್ಯವಾಗಲಿದೆ.
ಶಿರಹಟ್ಟಿ ತಾಲೂಕಿನಾದ್ಯಂತ ಜೆಜೆಎಂ ಕಾಮಗಾರಿಗಳು ಸಮರ್ಪಕವಾಗಿ ನಡೆಯದೇ ಇರುವ ಬಗ್ಗೆ ಸ್ವತ: ಶಾಸಕ ಡಾ. ಚಂದ್ರು ಲಮಾಣಿ ಅನೇಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ಬಗ್ಗೆ ಖಡಕ್ ಆಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ಸಹ ಇಲ್ಲಿ ಅಧಿಕಾರಿಗಳು ಪದೇ ಪದೇ ಬದಲಾಗುತ್ತಿರುವದರಿಂದ ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ತಾಲೂಕಾ ಮಟ್ಟದ ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಆದ್ದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಇಂತಹ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದಕ್ಕೆ ಕ್ರಮ ವಹಿಸಬೇಕಿದೆ ಎಂಬುದು ತಾಲೂಕಿನ ಸಾರ್ವಜನಿಕರ ಒತ್ತಾಯವಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಡಕೋಳ ಗ್ರಾ.ಪಂ ಅಧ್ಯಕ್ಷೆ ಹೇಮಾ ಶರಣಪ್ಪ ಹರ್ಲಾಪೂರ, ಕಡಕೋಳ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣಗೊಂಡಿದೆ. ಪೈಪ್ ಅಳವಡಿಸುವ ಸಂದರ್ಭದಲ್ಲಿ ಸಿಮೆಂಟ್ ರಸ್ತೆ ಹಾಳಾಗಿದ್ದು, ಇದನ್ನು ಇಲ್ಲಿಯವರೆಗೂ ಸರಿಪಡಿಸಿಲ್ಲ. ಗ್ರಾ.ಪಂನಿAದ ತಾತ್ಕಾಲಿಕವಾಗಿ ಮಣ್ಣು ಹಾಕಿ ಪೈಪ್ಗಳನ್ನು ಮುಚ್ಚಲಾಗಿದೆ. ಕೆಲವು ಕಡೆಗಳಲ್ಲಿ ನಲ್ಲಿ ಸಂಪರ್ಕ ಮಾಡಿಲ್ಲ. ಈ ಬಗ್ಗೆ ಸಂಬAಧಿಸಿದ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶೀಘ್ರದಲ್ಲೇ ಗ್ರಾಮಸ್ಥರ ಸಹಕಾರದಿಂದ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಶಿರಹಟ್ಟಿ ಆರ್ಡಬ್ಲುö್ಯಎಸ್ ಕಚೇರಿ ಎದುರು ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದರು.
**ಬಾಕ್ಸ್**
ಗ್ರಾ.ಪಂ ಪಿಡಿಓ ಸುಜಾತಾ ಕಪ್ಪಲಿ, ಕಾಮಗಾರಿಯ ರಿಸ್ಟೊರೇಶನ್ ಆಗದೇ ಇರುವ ಬಗ್ಗೆ ಆರ್ಡಬ್ಲ್ಯುಎಸ್ ಕಚೇರಿಗೆ ಪತ್ರ ಮುಖೇನ ತಿಳಿಸಲಾಗಿದೆ ಎಂದರೆ, ಆರ್ಡಬ್ಲ್ಯುಎಸ್ ಜೆಇ, ಎಂ.ಬಿ. ಹರಕುಣಿ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದೆ. ಫೈನಲ್ ನೋಟೀಸ್ ಇಶ್ಯೂ ಆಗಿದ್ದು ಡಿವಿಜಿನ್ ಕಚೇರಿಗೆ ಕಳುಹಿಸಲಾಗಿದೆ ಎಂದರು.



