ಬಾಗಲಕೋಟೆ: ಬಿಜೆಪಿ ರೋಡ್ ಶೋ ವೇಳೆ ಕಾಂಗ್ರೆಸ್ ಧ್ವಜ ಹಿಡಿದು ‘ಕೈ’ ಕಾರ್ಯಕರ್ತರು ಭಾರೀ ಹೈಡ್ರಾಮಾ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ.
ಬೈ ಎಲೆಕ್ಷನ್ಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಉಭಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ವೇಳೆ ಬಿಜೆಪಿ ರೋಡ್ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧ್ವಜ ಹಿಡಿದು ಪ್ರವೇಶಿಸಿದ್ದರಿಂದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದಿದೆ.
ರೋಡ್ ಶೋ ನಡುವೆ ಬಿಜೆಪಿ ಕಾರ್ಯಕರ್ತರ ಮಧ್ಯೆ ಬೈಕ್ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಕಾರ್ಯಕರ್ತ ಯತ್ನಿಸಿದ ಹಿನ್ನೆಲೆ ವಾಗ್ವಾದ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಬಳಿಕ ತಳ್ಳಾಟ-ಜಗ್ಗಾಟಕ್ಕೂ ಕಾರಣವಾಯಿತು.
ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಸಂಬಂಧಿಸಿದ ಕಾಂಗ್ರೆಸ್ ಕಾರ್ಯಕರ್ತನನ್ನು ಎಳೆದು ಹೊರತೆಗೆದರು. ಈ ವೇಳೆ ಇತರ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಸಂಬಂಧಿಸಿದ ಕಾರ್ಯಕರ್ತನನ್ನು ಸ್ಥಳದಿಂದ ತೆರವುಗೊಳಿಸಿದ ಬಳಿಕ ವಾತಾವರಣ ಶಾಂತಗೊಂಡಿತು.



