ಬೆಂಗಳೂರು: ಕರ್ನಾಟಕವು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದ್ದು, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘CIDECODE’ 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಕೇವಲ ಒಂದು ರಾಜ್ಯವಲ್ಲ, ಅದು ಜಾಗತಿಕ ಬ್ರ್ಯಾಂಡ್. ಜಗತ್ತು ಬೆಂಗಳೂರಿನತ್ತ ನೋಡಿದಾಗ ನವೀನತೆ ಮತ್ತು ತಂತ್ರಜ್ಞಾನದ ಭವಿಷ್ಯ ಕಾಣುತ್ತದೆ. ಉತ್ತಮ ಮತ್ತು ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಸೈಬರ್ ದಾಳಿಗಳನ್ನು ತನಿಖೆ ಮಾಡಲು ಹಾಗೂ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಅಗತ್ಯವಾದ ಕೌಶಲ್ಯ, ತರಬೇತಿ ಮತ್ತು ತಂತ್ರಜ್ಞಾನದೊಂದಿಗೆ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಅಪಾಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳೊಂದಿಗೆ ಸಹಕಾರ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಇನ್ನೂ ನಾಗರಿಕರಿಗೆ ಹೆಚ್ಚಿನ ಡಿಜಿಟಲ್ ಸುರಕ್ಷತೆ ಒದಗಿಸಲು ಖಾಸಗಿ ವಲಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೇಗವಾಗಿ ಬದಲಾಗುತ್ತಿರುವ ಸೈಬರ್ ಬೆದರಿಕೆಗಳನ್ನು ಎದುರಿಸಲು ಇಂತಹ ಸಂವಾದಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.



