ಗದಗ: ಉತ್ತರ ಕರ್ನಾಟಕದ ಜನಜೀವನದ ಭಾಗವೇ ಆಗಿರುವ ಖಡಕ್ ರೊಟ್ಟಿ ಜಾತ್ರೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿರುವ ತೋಂಟದಾರ್ಯ ಮಠದಲ್ಲಿ ಇಂದಿನಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಹರಿದುಬರುತ್ತಿದ್ದು, ಗ್ರಾಮ ಸಕಲ ಸಿದ್ಧತೆಯೊಂದಿಗೆ ಜಾತ್ರೆಗೆ ಸಜ್ಜಾಗಿದೆ.
ಜಾತ್ರೆಯ ವಿಶೇಷತೆಯಾದ ಖಡಕ್ ಜೋಳದ ರೊಟ್ಟಿ ತಯಾರಿಕೆ ಕಾರ್ಯ ಭಕ್ತರಿಂದ ಭರದಿಂದ ನಡೆಯುತ್ತಿದೆ. ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸಿ ಮಠಕ್ಕೆ ಅರ್ಪಿಸುವ ಮೂಲಕ ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿ ಪ್ರದರ್ಶಿಸುತ್ತಿದ್ದಾರೆ.
ಇಂದು ಸಂಜೆ ಅದ್ಧೂರಿಯಾಗಿ ಮಹಾರಥೋತ್ಸವ ನಡೆಯಲಿದ್ದು, ನಾಳೆ ಆರೋಗ್ಯ ಶಿಬಿರ ಹಾಗೂ ಬಹು ನಿರೀಕ್ಷಿತ ಖಡಕ್ ರೊಟ್ಟಿ ಊಟದ ಜಾತ್ರೆ ನಡೆಯಲಿದೆ. ಖಡಕ್ ರೊಟ್ಟಿಯ ಜೊತೆಗೆ ಬಾನ, ಪಲ್ಯ, ಕರಿಹಿಂಡಿ, ಬಿಸಿಬರ್ತ ಅನ್ನ ಮತ್ತು ಸಾಂಬರ್ ರುಚಿ ಸವಿಯಲು ಭಕ್ತರು ದೂರ ದೂರದ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ.
ಇಂದು ಮಹಾರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ನಾಳೆ ನಡೆಯುವ ರೊಟ್ಟಿ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವುದು ಜಾತ್ರೆಯ ಪ್ರಮುಖ ಸಂಪ್ರದಾಯವಾಗಿದೆ. ಗದಗ ಜಿಲ್ಲೆಯೊಂದಿಗೆ ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಧಾರ್ಮಿಕ ಆಚರಣೆ, ಸಂಸ್ಕೃತಿ ಮತ್ತು ಆಹಾರ ಪರಂಪರೆಯ ಸಂಗಮವಾದ ಶಿರೋಳ ತೋಂಟದಾರ್ಯ ಮಠದ ಖಡಕ್ ರೊಟ್ಟಿ ಜಾತ್ರೆ ಉತ್ತರ ಕರ್ನಾಟಕದ ಹೆಮ್ಮೆಯ ಉತ್ಸವವಾಗಿ ಮತ್ತೊಮ್ಮೆ ಮೆರೆದಿದೆ.



