HomeChikkamagaluruಸಕಲ ಧರ್ಮಕ್ಕೂ ದಯೆ, ಮಾನವೀಯತೆ ಮುಕುಟಪ್ರಾಯ

ಸಕಲ ಧರ್ಮಕ್ಕೂ ದಯೆ, ಮಾನವೀಯತೆ ಮುಕುಟಪ್ರಾಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಜಗದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇವೆ. ನೋಡುವ ದೃಷ್ಟಿಯನ್ನು ಅವಲಂಬಿಸಿರುತ್ತದೆ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಮಾಜದ ಕಷ್ಟ-ಸುಖಗಳನ್ನು ಚಿಂತಿಸಿ ಅವುಗಳಿಗೆ ಪರಿಹಾರ ಮಾಡುವ ಕಾರ್ಯದಲ್ಲಿ ಪ್ರವೃತ್ತರಾಗಿರುವುದೇ ನಿಜವಾದ ಧರ್ಮ. ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಸತ್ಯ ಸಂಸ್ಕೃತಿ ಗೌರವಿಸದೇ ಹೋದರೆ ಜೀವನ ನಾಶಗೊಳ್ಳುತ್ತದೆ. ಜೀವ ಹೋಗುವ ಈ ದೇಹ, ನಾಶವಾಗುವ ಈ ಸಂಪತ್ತು ಮತ್ತು ಮಾಸಿ ಹೋಗುವ ಸೌಂದರ್ಯವನ್ನು ನೆಚ್ಚದೇ ಸತ್ಯ ಶುದ್ಧ ಧರ್ಮ ಮಾರ್ಗದಲ್ಲಿ ನಡೆಯುವುದರಿಂದ ಜೀವನದಲ್ಲಿ ಸಕಲ ಸಂಪತ್ತು ಶಾಂತಿ ದೊರಕುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಸಿದ್ಧಾಂತದಲ್ಲಿ ಬೋಧಿಸಿದ್ದಾರೆ.

ನಾವು ಏನು ಪಡೆದಿದ್ದೇವೆ ಎನ್ನುವುದಕ್ಕಿಂತ ಹೇಗೆ ದುಡಿದಿದ್ದೇವೆ ಎಂಬುದು ಮುಖ್ಯ. ಏನು ನುಡಿದಿದ್ದೇವೆ ಎನ್ನುವುದಕ್ಕಿಂತ ಹೇಗೆ ನಡೆದಿದ್ದೇವೆ ಎಂಬುದು ಮುಖ್ಯ. ಏನು ಗಳಿಸಿದ್ದೇವೆ ಎನ್ನುವುದಕ್ಕಿಂತ ಹೇಗೆ ಬೆಳೆದಿದ್ದೇವೆ ಎಂಬುದು ಮುಖ್ಯ. ಏನು ಹೇಳಿ ಕೇಳಿದೆವು ಅನ್ನುವುದಕ್ಕಿಂತ ಹೇಗೆ ಬಾಳಿದೆವು ಎಂಬುದು ಮುಖ್ಯ. ಅರಿತು ಬಾಳುವುದರಿಂದ ಬಾಳು ವಿಕಾಸಗೊಳ್ಳುವುದೆಂದರು.

ರಾಜ್ಯದ ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲರು ಶ್ರೀ ರಂಭಾಪುರಿ ಪೀಠಕ್ಕೆ ಭೇಟಿಯಿತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.

ಸಮಾರಂಭದಲ್ಲಿ ನೆಗಳೂರು, ಆಲಮೇಲ, ಸೋನಪೇಟೆ, ಹುಡುಗಿ, ವೆಂಕಟಬೆನ್ನೂರು ಶ್ರೀಗಳು ಪಾಲ್ಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಶುಮಂತ್, ಬಳ್ಳಾರಿ ಮಹಲಿಂಗಯ್ಯ, ಪ್ರಭುಸ್ವಾಮಿ, ಗ್ರಾಮ ಪಂಚಾಯತಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಸುಮಾರು 13 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಮತ್ತು ಅಯ್ಯಾಚಾರ ಜರುಗಿತು. ಕ್ಷೇತ್ರದ ಎಲ್ಲ ದೈವಗಳಿಗೆ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ಜರುಗಿದವು.

ಜಾತಿ ಜನಗಣತಿ ನಿರ್ಧಾರಕ್ಕೆ ಸ್ವಾಗತ

 ರಾಜ್ಯದಲ್ಲಿ ಜಾತಿ ಜನಗಣತಿಯನ್ನು ಮತ್ತೊಮ್ಮೆ ಮಾಡಬೇಕೆಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ಕಾಂಗ್ರೆಸ್ ಧುರೀಣರು ಹೇಳಿದ ಮಾತಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿರುವುದಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜಾತಿ ಜನಗಣತಿ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡದವರು ವೀರಶೈವ ಲಿಂಗಾಯತ ಎಂದೇ ಬರೆಸಬೇಕೆಂದು ಶ್ರೀಗಳು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!