ಬೆಂಗಳೂರು:- ಕೋಗಿಲು ಲೇಔಟ್ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಪಡೆದು ಸರ್ಕಾರಿ ಜಾಗ ಕೊಟ್ಟ ನಾಲ್ವರ ವಿರುದ್ಧ ಇದೀಗ FIR ದಾಖಲಾಗಿದೆ.
ಯಲಹಂಕ ಪೊಲೀಸ್ ಠಾಣೆಯಲ್ಲಿ ಸ್ಥಳೀಯರಿಂದ ಹಣ ಪಡೆದು ಮನೆ ನೀಡಿದ ಆರೋಪದಡಿ ಎ1 ವಿಜಯ್, ಎ2 ವಸೀಂ, ಎ3 ಮುನಿ ಆಂಜನಪ್ಪ, ಎ4 ರಾಬೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿ ಸಂತೋಷ್ ಕಡಾಡಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ಸಂಜೆ ಎ1 ವಿಜಯ್ ಹಾಗೂ ಎ2 ವಸೀಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ, ಕೋಗಿಲು ಲೇಔಟ್‌ನಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ನಿವಾಸಿಗಳನ್ನು ಯಲಹಂಕ ಠಾಣೆಗೆ ಕರೆಸಿ ಎರಡು ತಂಡಗಳಲ್ಲಿ ತಲಾ ಐದು ಮಂದಿಯಂತೆ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಕೋಗಿಲು ಲೇಔಟ್‌ನ ನಿರಾಶ್ರಿತರಿಗೆ ಮನೆ ಹಂಚಿಕೆ ವಿಳಂಬವಾಗುವ ಸಾಧ್ಯತೆ ಇದ್ದು, ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಸ್ತುಸ್ಥಿತಿಯ ಬಗ್ಗೆ ಚರ್ಚಿಸಿ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿದವರಿಗೆ ಮನೆ ನೀಡುವ ಕುರಿತು ಸಾಧಕ-ಬಾಧಕಗಳನ್ನೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಈ ನಡುವೆ ವಸತಿ ಇಲಾಖೆ ಅಧಿಕಾರಿಗಳು ಬೈಯಪ್ಪನಹಳ್ಳಿಯ ಅಪಾರ್ಟ್‌ಮೆಂಟ್ ಬಳಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿದ್ದು, ಸಿಎಂ ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.



