ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮನೆಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದು, ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದವರಾಗಿದ್ದರೆ ಮಾತ್ರ ಪುನರ್ವಸತಿ ಮನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಪಾಕಿಸ್ತಾನದ ಹೆಸರನ್ನು ಎಳೆದು ತರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ನಮ್ಮ ದೇಶದ ವಿಚಾರದಲ್ಲಿ ಮಾತನಾಡಲು ಅವರಿಗೆ ಯಾವ ಹಕ್ಕಿಲ್ಲ ಎಂದು ಕಿಡಿಕಾರಿದರು.
ಪಾಕಿಸ್ತಾನದಲ್ಲಿ ಬಡತನ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಮೊದಲು ಅವರು ತಮ್ಮ ದೇಶವನ್ನು ನೋಡಿಕೊಳ್ಳಲಿ ಎಂದು ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದರು. ಮುಸ್ಲಿಮರನ್ನು ನೋಡಿಕೊಳ್ಳುವ ವಿಚಾರದಲ್ಲಿ ಹೊರಗಿನವರು ಸಲಹೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ ಸಚಿವರು, ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಡಾಕ್ಯುಮೆಂಟ್ ಪರಿಶೀಲನೆಯ ನಂತರ ನಿಜವಾದ ಕರ್ನಾಟಕದವರಿಗೆ ಮಾತ್ರ ಮನೆ ನೀಡಲಾಗುವುದು. ಹೊರಗಿನಿಂದ ಬಂದವರಿಗೆ ಯಾವುದೇ ಮನೆ ನೀಡುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.



