ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಗೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಲಿಫ್ಟ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲ್ಪಟ್ಟ ಮೃತರು, ತಮ್ಮ ಮಗನ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದರು. ಮಗನ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಅವರು ಲಿಫ್ಟ್ ಮೂಲಕ ಕೆಳಕ್ಕೆ ಬರುತ್ತಿದ್ದ ವೇಳೆ, ಲಿಫ್ಟ್ ಅಚಾನಕ್ ಸ್ಥಗಿತಗೊಂಡು ಮೂವರು ಒಳಗೆ ಸಿಲುಕಿಕೊಂಡಿದ್ದರು.
ಬಹಳ ಹೊತ್ತಿನವರೆಗೆ ಅವರು ಹಿಂದಿರುಗದಿದ್ದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದ್ದು, ಕೊನೆಗೆ ಲಿಫ್ಟ್ ಒಳಗೇ ಅವರ ಶವ ಪತ್ತೆಯಾಗಿದೆ.
ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಲಿಫ್ಟ್‌ಮ್ಯಾನ್ ಇಲ್ಲದಿರುವುದು ಹಾಗೂ ಲಿಫ್ಟ್ ದುರಸ್ತಿ ಮಾಡದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಆರೋಪಗಳು ಕೇಳಿಬಂದಿವೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.



