ಬೆಂಗಳೂರು: KSOUಯಲ್ಲಿ ದೀನದಯಾಳ್ ಉಪಾಧ್ಯಯ ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದೊಂದು ರಾಜ್ಯದ ದುರಂತವಾಗಿದ್ದು,
ಶಿಕ್ಷಣ ಕ್ಷೇತ್ರದಲ್ಲಿ ಕೇಸರಿಕರಣ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಈ ವಿಚಾರವನ್ನು ಸದನದಲ್ಲಿ ರಮೇಶ್ ಬಾಬು ಪ್ರಸ್ತಾಪಿಸಿದ್ದಾಗಿ ತಿಳಿಸಿದ ಅವರು, ವಿಶ್ವವಿದ್ಯಾಲಯದ ಉಪಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಉನ್ನತ ಶಿಕ್ಷಣ ಸಚಿವರು ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರೂ, ಕಾರ್ಯಕ್ರಮ ನಡೆದಿರುವುದು ಸರ್ಕಾರದ ವಿರುದ್ಧ ನಡೆದ ಪಿತ್ತೂರಿಯಾಗಿದೆ ಎಂದು ಹರಿಪ್ರಸಾದ್ ಟೀಕಿಸಿದರು. ತಕ್ಷಣ ಉಪಕುಲಪತಿಯನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.ವಿಶ್ವವಿದ್ಯಾಲಯಗಳಿಗೆ ಸರ್ಕಾರವೇ ಹಣ, ಭೂಮಿ ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸುತ್ತಿದ್ದು, ಸರ್ಕಾರದ ವಿರುದ್ಧ ಈ ರೀತಿಯ ನಡೆ ಖಂಡನೀಯ ಎಂದರು.
ಪಂಚರಾಜ್ಯಗಳ ಚುನಾವಣೆಯನ್ನು ಉಲ್ಲೇಖಿಸಿದ ಹರಿಪ್ರಸಾದ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮಿಳುನಾಡು, ಕೇರಳ, ಪಾಂಡೀಚೇರಿಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಿ, ಅಸ್ಸಾಂನಲ್ಲಿ ಮಾತ್ರ ಪ್ರಯತ್ನಿಸುತ್ತಿದೆ ಎಂದರು.ವೆಸ್ಟ್ ಬೆಂಗಾಲ್ನಲ್ಲಿ ಅನಗತ್ಯ ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಲಕ್ಷಾಂತರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು. ಚುನಾವಣಾ ಆಯೋಗವೂ ಬಿಜೆಪಿ ಪ್ರಭಾವದಲ್ಲಿದೆ ಎಂದು ಟೀಕಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎಷ್ಟು ಕಚೇರಿಗಳನ್ನು ಹೊಂದಿದೆ ಎಂದು ಪ್ರಶ್ನಿಸಿದರು. ನಾವು ಇದಕ್ಕೆ ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದು ಹೇಳಿದರು. ವಿಧಾನಸಭೆ ಮತ್ತು ಪರಿಷತ್ ಸದಸ್ಯರಿಗೆ ಸ್ಪೀಕರ್ ಆಯೋಜಿಸಿದ ಫೋಟೋಶೂಟ್ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಇದರಲ್ಲಿ ಯಾವುದೇ ವಿಶೇಷ ಸಂದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲರಿಗೂ ಫೋಟೋ ತೆಗೆಸಿಕೊಳ್ಳುವ ಆಸೆ ಇರುತ್ತದೆ, ಅದಕ್ಕಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಕೆಲವರ ಅವಧಿ ಮುಗಿಯಲಿರುವ ಹಿನ್ನೆಲೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಉಹಾಪೋಹಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿದರು.



