ಬೆಂಗಳೂರು:– KSRTC ಬಸ್ ದರ ಏರಿಕೆ ಮಾಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುಳಿವು ನೀಡಿದ್ದಾರೆ.
ಬಸ್ ಟಿಕೆಟ್ ದರ ಏರಿಕೆಗೆ ಪಿಕ್ ಪಾಕೆಟ್ ಸರ್ಕಾರ ಹೊಸ ಪ್ರಯೋಗ ರೂಪಿಸುತ್ತಿದೆ ಎಂಬ ಆರ್ ಅಶೋಕ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು 5900 ಕೋಟಿ ರೂ.ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ ಎಂದು ಪ್ರತಿಪಕ್ಷ ನಾಯಕ ಅಶೋಕ್ ವಿರುದ್ಧ ಕಿಡಿಕಾರಿದ್ದಾರೆ.
ಜುಲೈ 14 ರಂದು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್ ದರ ಏರಿಸದೇ ಇದ್ದರೆ ಕೆಎಸ್‌ಆರ್‌ಟಿಸಿ ಸಂಸ್ಥೆ ಉಳಿಯುವುದಿಲ್ಲ ಎಂದು ಹೇಳಿದ್ದರು. ಸದ್ಯದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು 15-20% ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದರು.
ಪ್ರತಿ ಬಾರಿಯೂ ನಷ್ಟವನ್ನು ಸರಿದೂಗಿಸಿಕೊಡುವಂತೆ ಸರ್ಕಾರವನ್ನು ಕೇಳುವುದು ಸರಿಯಲ್ಲ. ನಷ್ಟವನ್ನು ಸರಿದೂಗಿಸಲು ಹಾಗೂ ಸಂಸ್ಥೆಯನ್ನು ಉಳಿಸಬೇಕಾದರೆ ಟಿಕೆಟ್ ದರ ಹೆಚ್ಚಿಗೆ ಮಾಡಲೇಬೇಕು ಎಂದು ಸಮಜಾಯಿಷಿ ಕೊಟ್ಟಿದ್ದರು.



