ದಾವಣಗೆರೆ:- ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಯ ಗಡಿಭಾಗದಲ್ಲಿ ಇರುವ ಶಾಮನೂರು ಶುಗರ್ ಫ್ಯಾಕ್ಟರಿಯಿಂದ ನೂರಾರು ಎಕರೆ ಭೂಮಿ ಕಬಳಿಕೆ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮಾಡಿದ್ದಾರೆ.
ಶಾಮನೂರು ಕುಟುಂಬದ ವಿರುದ್ಧ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಮನೂರು ಶುಗರ್ ಫ್ಯಾಕ್ಟರಿಯು ಹಳ್ಳದ ನೈಸರ್ಗಿಕ ದಾರಿಯನ್ನು ಮುಚ್ಚಿ, ರೈತರ ಭೂಮಿಯನ್ನು ಆವರಿಸಿಕೊಂಡಿದೆ. ಈ ವಿಷಯವನ್ನು ನಾನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ದೂರು ನೀಡಿದ್ದೇನೆ. ಇದರ ಹಿನ್ನೆಲೆಯಲ್ಲಿ ಚಿಕ್ಕಬಿದರಿ ಮತ್ತು ದುಗ್ಗಾವತಿ ಪ್ರದೇಶಗಳಲ್ಲಿ ಸರ್ವೇ ಮಾಡಲು ಆದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.
ಅ. 27ರಂದು ಸರ್ವೇ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಮರುಸರ್ವೇ ನಡೆಯಲಿದೆ ಎಂದು ಅವರು ಹೇಳಿದರು. “ಸರ್ವೇ ನಡೆಯಲಿದೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ, ಹಳ್ಳದ ದಾರಿ ಸರಿಪಡಿಸುವ ಕೆಲಸವನ್ನು ನಿನ್ನೆ ರಾತ್ರಿ ತುರ್ತಾಗಿ ನಡೆಸಿದ್ದಾರೆ” ಎಂದು ಹರೀಶ್ ಆರೋಪಿಸಿದರು.
“ಯಾವುದೇ ಕಾರಣಕ್ಕೂ ನಾನು ಈ ವಿಷಯವನ್ನು ಬಿಟ್ಟುಕೊಡುವುದಿಲ್ಲ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕಂದಾಯ ಸಚಿವರಾಗಿದ್ದಾಗಲೂ ಶಾಮನೂರು ಕುಟುಂಬ ಇದೇ ರೀತಿಯ ಪ್ರಯತ್ನ ಮಾಡಿತ್ತು. ಆಗ ನಾನು ಹೋರಾಟ ನಡೆಸಿ ರೈತರ ಭೂಮಿ ಉಳಿಸಿದ್ದೆ. ಇಂದು ಅದೇ ಹೋರಾಟ ನಡೆಸುತ್ತೇನೆ,” ಎಂದು ಹರೀಶ್ ಸ್ಪಷ್ಟಪಡಿಸಿದರು. ಈ ಆರೋಪಗಳ ಬಗ್ಗೆ ಶಾಮನೂರು ಕುಟುಂಬ ಅಥವಾ ಶಾಮನೂರು ಶುಗರ್ ಫ್ಯಾಕ್ಟರಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.



